ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಾರುಕಟ್ಟೆಗೆ ‘ನಿಟ್ಟೂರು ಸ್ವರ್ಣ’ ಸಾವಯವ ಅಕ್ಕಿ

ಹಡಿಲುಬಿದ್ದ 50 ಎಕರೆ ಭೂಮಿಯಲ್ಲಿ ಭತ್ತ ಬೆಳೆದ ನಿಟ್ಟೂರು ಶಾಲೆ ಹಳೆಯ ವಿದ್ಯಾರ್ಥಿಗಳು
Last Updated 13 ನವೆಂಬರ್ 2020, 17:02 IST
ಅಕ್ಷರ ಗಾತ್ರ

ಉಡುಪಿ: ನಿಟ್ಟೂರು, ಪುತ್ತೂರು, ಕಕ್ಕುಂಜೆ, ಕರಂಬಳ್ಳಿ, ಪೆರಂಪಳ್ಳಿ ವ್ಯಾಪ್ತಿಯಲ್ಲಿ ಹಡಿಲು ಬಿದ್ದಿದ್ದ 50 ಎಕರೆ ಭೂಮಿಯಲ್ಲಿ ನಿಟ್ಟೂರು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ತಂಡ ಭತ್ತದ ಕೃಷಿ ಮಾಡಿದ್ದು, ಶುಕ್ರವಾರ ‘ನಿಟ್ಟೂರು ಸ್ವರ್ಣ’ ಬ್ರಾಂಡ್‌ ಹೆಸರಿನ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮರಳಿ ಕಡೆಕಾರ್ ಹಡಿಲುಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ ಬಗೆಯನ್ನು ತಿಳಿಸಿದರು.

‘ಪಾಳುಬಿದ್ದ ಗದ್ದೆಗಳಲ್ಲಿ ಭತ್ತದ ನಾಟಿ ಮಾಡಬೇಕು ಎಂಬ ಸಂಕಲ್ಪ ಮಾಡಿದಾಗ ಹಲವು ಸವಾಲುಗಳು ಎದುರಾದವು. ಆದರೆ, ಸಂಕಲ್ಪ ದೃಢವಾಗಿದ್ದರಿಂದ ಸಮಸ್ಯೆಗಳು ದೊಡ್ಡದಾಗಿ ಕಾಣಲಿಲ್ಲ. ಕೃಷಿಕರ ಸಭೆ ನಡೆಸಿ 5 ಭಾಗಗಳಲ್ಲಿ ಕೃಷಿ ಭೂಮಿ ಗುರುತಿಸಿ ಭತ್ತದ ನಾಟಿಗೆ ನಿರ್ಧರಿಸಲಾಯಿತು. ದಶಕಗಳಿಂದ ಗದ್ದೆಗಳಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ಹೊರತೆಗೆದು ಭೂಮಿಯನ್ನು ಹಸನುಗೊಳಿಸಿ, ಯಂತ್ರ ಹಾಗೂ ಕೈನಾಟಿ ಮಾಡಲಾಯಿತು ಎಂದರು ಮುರುಳಿ ಕಡೆಕಾರ್.

ನಾಟಿ ನಂತರ ನೆರೆಬಂದು ಭತ್ತದ ಗದ್ದೆಗಳು ಮುಳುಗಿದವು. ನೆರೆ ತಗ್ಗಿದ ಬಳಿಕ ಮಳೆಯ ಕೊರತೆಯಿಂದ ಬೆಳೆ ಒಣಗಿತು. ಎಲ್ಲ ಸಮಸ್ಯೆಗಳನ್ನು ದೈರ್ಯವಾಗಿ ಎದುರಿಸಿ ಭತ್ತ ಬೆಳೆದಿದ್ದೇವೆ. 45 ಎಕರೆಯಷ್ಟು ಕಟಾವು ಕಾರ್ಯ ಮುಗಿದಿದೆ. ಸುಮಾರು 30 ಟನ್‌ ಭತ್ತದ ಇಳುವರಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭತ್ತ ಬೆಳೆಯುವುದು ಮಾತ್ರವಲ್ಲ; ಅದಕ್ಕೆ ಮಾರುಕಟ್ಟೆ ವ್ಯವಸ್ಥೆಯೂ ಮಾಡಬೇಕು ಎಂಬ ನಿಟ್ಟಿನಲ್ಲಿ ‘ನಿಟ್ಟೂರು ಸ್ವರ್ಣ’ ಎಂಬ ಬ್ರಾಂಡ್‌ ಹುಟ್ಟುಹಾಕಿ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯಲಾಗಿದ್ದು, ಅಕ್ಕಿಯನ್ನು 5, 10 ಹಾಗೂ 25 ಕೆ.ಜಿ ಬ್ಯಾಗ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆ.ಜಿಗೆ ₹ 50 ದರ ನಿಗದಿ ಮಾಡಲಾಗಿದೆ ಎಂದು ವಿವರ ನೀಡಿದರು.

ಕಜೆ ಹಾಗೂ ಪಾಲಿಶ್‌ ಅಕ್ಕಿಯಾಗಿ ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತಿದೆ. ತೌಡಿಗೂ ಬೆಲೆ ನಿಗದಿಪಡಿಸಲಾಗಿದ್ದು, ಸಾರ್ವಜನಿಕರಿಂದ ಬೇಡಿಕೆ ಉತ್ತಮವಾಗಿದೆ. ಅರ್ಪಿತಾ ಟ್ರೇಡರ್ಸ್‌, ನಿಟ್ಟೂರು ಪ್ರೌಢಶಾಲೆ ಹಾಗೂ ರಥಬೀದಿಯ ಸಮೀಪದ ಯಕ್ಷಗಾನ ಕಲಾಮಂದಿರದಲ್ಲಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಭತ್ತದ ಹುಲ್ಲನ್ನು ಗೋಶಾಲೆಗಳಿಗೆ ನೀಡಲಾಗುತ್ತಿದೆ. ಅಕ್ಕಿಯ ಮಾರಾಟದಿಂದ ಬಂದ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸುತ್ತಿಲ್ಲ. ಬದಲಾಗಿ, ಸಮಾಜಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಮುರಳಿ ಕಡೆಕಾರ್ ತಿಳಿಸಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌ ‘ನಿಟ್ಟೂರು ಸ್ವರ್ಣ’ ಅಕ್ಕಿಯನ್ನು ಮಾರುಕಟ್ಟೆ ಬಿಡುಗಡೆ ಮಾಡಿದರು. ಹಿರಿಯರಾದ ಭಾಸ್ಕರ್ ಸುವರ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

‘ಶ್ರಮಕ್ಕೆ ಸಿಕ್ಕ ಫಲ’

ಭತ್ತ ಬೆಳೆಯಲು ನಿಟ್ಟೂರು ಶಾಲೆಯ ಹಳೆಯ ವಿದ್ಯಾರ್ಥಿಗಳ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಪ್ರತಿಫಲಾಪೇಕ್ಷೆ ಇಲ್ಲದೆ ತಪ್ಪಿಸ್ಸಿನಂತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದೆ. ರೈತರು ಕೂಡ ಭೂಮಿ ಕೊಟ್ಟಿದ್ದಾರೆ. ಹಲವರು ದೇಣಿಗೆ ನೀಡಿದ್ದಾರೆ. ಕೃಷಿಯಿಂದ ರೈತರು ವಿಮುಖರಾಗಬಾರದು, ಗದ್ದೆಗಳು ಹಡಿಲು ಬೀಳಬಾರದು ಎಂಬ ಉದ್ದೇಶ ಈಡೇರಿದೆ.

ಮುರಳಿ ಕಡೆಕಾರ್, ನಿಟ್ಟೂರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT