ಮಂಗಳವಾರ, ಜೂನ್ 15, 2021
20 °C
ಬಡವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ; ಕೋವಿಡ್ ಕೇಂದ್ರಗಳ ಸ್ಥಾಪನೆ

ಉಡುಪಿ: ಕಠಿಣ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ಗೆ ಜನರ ಸ್ಪಂದನ ಉತ್ತಮವಾಗಿದೆ. ಬುಧವಾರವೂ ಜನರು ಬೆಳಿಗ್ಗೆ 10 ಗಂಟೆಯೊಳಗೆ ಮನೆಗೆ ಬೇಕಾದ ದಿನಸಿ, ತರಕಾರಿ, ಹಣ್ಣುಗಳನ್ನು ಖರೀದಿಸಿ ಮನೆಗೆ ವಾಪಾಸಾದರು.

ಮೊದಲ ದಿನ ಮಾರುಕಟ್ಟೆಗೆ ಬರಲು ದ್ವಿಚಕ್ರ ವಾಹನಗಳನ್ನು ತರುವಂತಿಲ್ಲ ಎಂಬ ಕಠಿಣ ನಿಯಮ ಹೇರಲಾಗಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರಾವಳಿಯ ಗ್ರಾಮೀಣ ಭಾಗದಲ್ಲಿ ಮನೆಗಳು ಚದುರಿದಂತಿದ್ದು, ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಗಳಿಗೆ ಬರಲು ಐದಾರು ಕಿ.ಮೀ ಪ್ರಯಾಣ ಮಾಡುವುದು ಅನಿವಾರ್ಯ. ವೃದ್ಧರು, ಮಹಿಳೆಯರು ನಡೆದುಕೊಂದು ಮಾರುಕಟ್ಟೆಗೆ ಬರಲು ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು.

ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಬಳಕೆಗೆ ಅನುಮತಿ ದೊರೆತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಾಗುತ್ತಿದ್ದು, ಸಾರ್ವಜನಿಕರು ಬೆಂಬಲವೂ ಉತ್ತಮವಾಗಿದೆ.

ಮಲ್ಪೆ ಬಂದರಿನಲ್ಲಿ ಮೀನು ಖರೀದಿಗೆ ಹಾಗೂ ಮಾರಾಟಕ್ಕೆ ಅವಕಾಶ ಇಲ್ಲದ ಪರಿಣಾಮ ಮೀನು ಮಾರುಕಟ್ಟೆಯಲ್ಲಿ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ. ಮೀನಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಹಿಳೆಯರು ರಸ್ತೆಗಳ ಬದಿಯಲ್ಲೂ ಮೀನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಕೆಎಂಎಫ್‌ ಹಾಲಿನ ಬೂತ್‌ಗಳು ಹಾಗೂ ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತೆರೆಯಲು ಅವಕಾಶವಿದೆ. ಚೆಕ್‌ಪೋಸ್ಟ್‌ಗಳನ್ನು ಬಿಗಿ ಮಾಡಲಾಗಿದ್ದು, ಅಂತರ ಜಿಲ್ಲಾ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಬುಧವಾರ ನಿಯಮ ಉಲ್ಲಂಘಿಸಿದ ಉಡುಪಿಯ 9 ಹಾಗೂ ಕುಂದಾಪುರದ 16 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.

ನಿರ್ಗತಿಕರಿಗೆ ಇಂದಿರಾ ಕ್ಯಾಂಟಿನ್‌ ಊಟ

ಲಾಕ್‌ಡೌನ್ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿರುವ ನಿರ್ಗತಿಕರು ಹಾಗೂ ಭಿಕ್ಷುಕರು ಊಟಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಣಿಪಾಲ ಹಾಗೂ ಉಡುಪಿ ತಾಲ್ಲೂಕು ಪಂಚಾಯಿತಿ ಕಚೇರಿಯ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ಒದಗಿಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಉದಯ್‌ ಶೆಟ್ಟಿ ಮಾಹಿತಿ ನೀಡಿದರು.

ಕೋವಿಡ್ ಕೇರ್ ಕೇಂದ್ರ ಸ್ಥಾಪನೆ

ಮನೆಯಲ್ಲಿ ಹೋಂ ಐಸೊಲೇಷನ್‌ ಆಗಲು ಸಮಸ್ಯೆ ಇದ್ದವರಿಗೆ ತಾಲ್ಲೂಕು ಮಟ್ಟದಲ್ಲಿ ಕೋವಿಡ್‌ ಕೇರ್ ಸೆಂಟರ್ ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೋವಿಡ್ ಬಾಧಿತರಿಗೆ ಕೋವಿಡ್‌ಕೇರ್ ಕೇಂದ್ರಗಳಲ್ಲಿ ಅವಶ್ಯ ಸೌಲಭ್ಯಗಳಾದ ಬೆಡ್ ವ್ಯವಸ್ಥೆ, ಊಟ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕೋವಿಡ್‌ಕೇರ್ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ನೋಡೆಲ್ ಅಧಿಕಾರಿಗಳ ವಿವರ

ಕುಂದಾಪುರ ತಾಲ್ಲೂಕಿನ ದೇವರಾಜಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕೋವಿಡ್‌ಕೇರ್ ಸೆಂಟರ್‌ಗೆ ಕುಂದಾಪುರ ಭೂದಾಖಲೆಗಳ ಸಹಾಯಕ ನಿರ್ದೇಶಕ ಜಗದೀಶ್‌ (9902197826), ಕಾರ್ಕಳ ತಾಲ್ಲೂಕಿನ ಮಿಯಾರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ನಿಲಯಕ್ಕೆ ಕಾರ್ಕಳ ಅಕ್ಷರ ದಾಸೋಹ ಶಿಕ್ಷಣ ಇಲಾಖೆಯ ಸಹಾಯಕ ನಿದೇರ್ಶಕ ಭಾಸ್ಕರ (9449494011), ಹೆಬ್ರಿ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಮನ್ವಯಾಧಿಕಾರಿ ಶ್ರೀಶೆಟ್ಟಿ ಪ್ರವೀಣ್ (9448847958), ಉಡುಪಿ ತಾಲ್ಲೂಕಿನ ಎಂ.ಐ.ಟಿ ಹಾಸ್ಟೆಲ್‌ನ ಕೋವಿಡ್‌ಕೇರ್ ಸೆಂಟರ್‌ಗೆ ಭೂದಾಖಲೆಗಳ ಸಹಾಯಕ ನಿದೇರ್ಶಕ ತಿಪ್ಪೇರಾಯ ಕರೆಪ್ಪ ತೊರವಿ(8277040047) ಅವರನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ನೋಡೆಲ್ ಅಧಿಕಾರಿಗಳು ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದರೆ, ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು