ಶನಿವಾರ, ಜನವರಿ 22, 2022
16 °C
‘ಮನೆಮನೆಗೆ ಲಸಿಕಾ ಮಿತ್ರರು’ ಕಾರ್ಯಕ್ರಮವೂ ಲಸಿಕಾಕರಣ ಹೆಚ್ಚಳಕ್ಕೆ ಸಹಕಾರಿ

ಒಮೈಕ್ರಾನ್ ಭೀತಿ: ಲಸಿಕೆಗೆ ಮುಗಿಬಿದ್ದ ಜನರು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದರೂ ಕೋವಿಡ್–19 ಲಸಿಕೆ ಹಾಕಿಸಿಕೊಳ್ಳಲು ತಾತ್ಸಾರ ತೋರುತ್ತಿದ್ದವರು ಈಗ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳತ್ತ ಮುಗಿಬೀಳುತ್ತಿದ್ದಾರೆ. ಇದು ಕೋವಿಡ್ ರೂಪಾಂತರಿ ಒಮೈಕ್ರಾನ್ ವೈರಾಣು ಸೃಷ್ಟಿಸಿರುವ ಭೀತಿ.

ಸೋಂಕಿನಿಂದ ಗರಿಷ್ಠ ಸುರಕ್ಷತೆ ಪಡೆಯಲು ಪ್ರತಿಯೊಬ್ಬರೂ 2 ಡೋಸ್ ಲಸಿಕೆ ಪಡೆಯುವುದು ಅಗತ್ಯ ಎಂದು ತಜ್ಞರು ಶಿಫಾರಸು ಮಾಡಿರುವುದು ಲಸಿಕೆ ಹಾಕಿಸಿಕೊಳ್ಳದವರ ನಿದ್ದೆ ಗೆಡಿಸಿದೆ. ಇದುವರೆಗೂ ಒಂದೂ ಡೋಸ್ ಲಸಿಕೆ ತೆಗೆದುಕೊಳ್ಳದವರು ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಒಂದು ಡೋಸ್ ಪಡೆದು ಎರಡನೇ ಡೋಸ್ ಪಡೆಯಲು ಅವಧಿ ಮೀರಿದ್ದವರೂ ಖುದ್ದು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ ಎನ್ನುತ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು.

ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ರೂಪಾಂತರಿ ಒಮೈಕ್ರಾನ್ ಸೋಂಕು ಪತ್ತೆಯಾದ ಬಳಿಕ ಜಿಲ್ಲೆಯಲ್ಲಿ ಲಸಿಕಾಕರಣಕ್ಕೆ ವೇಗ ದೊರೆತಿದೆ. ಜಿಲ್ಲೆಯಲ್ಲಿ 9,99,000 ಮಂದಿಗೆ ಮೊದಲ ಡೋಸ್‌ ಲಸಿಕೆ ಗುರಿಗೆ ಪ್ರತಿಯಾಗಿ ಅ.31ರ ಅಂತ್ಯಕ್ಕೆ 9,19,074 ಮಂದಿ ಮೊದಲ ಡೋಸ್ ಪಡೆದಿದ್ದರು. ಶೇ 92ರಷ್ಟು ಗುರಿ ಸಾಧನೆಯಾಗಿತ್ತು.

9,99,000 ಮಂದಿಗೆ ಎರಡನೇ ಡೋಸ್‌ ಲಸಿಕೆ ಗುರಿಗೆ ಪ್ರತಿಯಾಗಿ ಅ.31ರ ಅಂತ್ಯಕ್ಕೆ 5,29,426 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದರು. ಶೇ 53ರಷ್ಟು ಮಾತ್ರ ಗುರಿ ಸಾಧನೆಯಾಗಿತ್ತು. ಮೊದಲ ಹಾಗೂ ಎರಡನೇ ಡೋಸ್‌ ಪಡೆದವರ ಸಂಖ್ಯೆ 14,48,500 ಇತ್ತು. 

ನ.4ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಮೊದಲ ಡೋಸ್‌ ಲಸಿಕೆ ಪಡೆದವರ ಸಂಖ್ಯೆ 9,43,089ಕ್ಕೆ ಹೆಚ್ಚಳವಾಗಿದ್ದು, ಶೇ 94.40 ಗುರಿ ಸಾಧನೆಯಾಗಿದೆ. ಹಾಗೆಯೇ ಎರಡನೇ ಡೋಸ್ ಪಡೆದವರ ಸಂಖ್ಯೆ 7,43,484ಕ್ಕೆ ಏರಿಕೆಯಾಗಿದ್ದು, ಶೇ 74.42 ಗುರಿ ತಲುಪಲಾಗಿದೆ.

ಅಂದರೆ, ಕೇವಲ 34 ದಿನಗಳಲ್ಲಿ 24,015 ಮಂದಿ ಮೊದಲ ಡೋಸ್ ಪಡೆದಿದ್ದು, ಶೇ 2.42ರಷ್ಟು ಹೆಚ್ಚಳವಾಗಿದೆ. 2,14,058 ಸಾರ್ವಜನಿಕರು ಎರಡನೇ ಡೋಸ್‌ ಲಸಿಕೆ ಪಡೆದಿದ್ದು ಶೇ 21.42ರಷ್ಟು ಏರಿಕೆಯಾಗಿದೆ ಎಂದು ಜಿಲ್ಲಾ ಕೋವಿಡ್‌ ಲಸಿಕಾಧಿಕಾರಿ ಎಂ.ಜಿ.ರಾಮ ಮಾಹಿತಿ ನೀಡಿದರು.

ಲಸಿಕಾ ಮಿತ್ರರ ಶ್ರಮ:

ಒಮೈಕ್ರಾನ್ ಭೀತಿಯ ಜತೆಗೆ ಜಿಲ್ಲಾಡಳಿತ ಆರಂಭಿಸಿರುವ ‘ಮನೆ ಮನೆಗೆ ಲಸಿಕಾ ಮಿತ್ರರು’ ಕಾರ್ಯಕ್ರಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, ಲಸಿಕಾಕರಣಕ್ಕೆ ವೇಗ ದೊರೆತಿದೆ. ಲಸಿಕಾ ಮಿತ್ರರು ಪ್ರತಿ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳದವರನ್ನು ಪತ್ತೆಹಚ್ಚಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವುದು ಹಾಗೂ ಲಸಿಕೆ ಹಾಕಿಸಿಕೊಂಡರೆ ಸಿಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಲಸಿಕೆ ಹಾಕಿಸಿಕೊಳ್ಳುವವ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌.

ಹಿಂದೆ, ಒಂದೇ ಡೋಸ್ ಲಸಿಕೆ ಪಡೆದರೂ ಸಾಕು, ರೋಗ ನಿರೋಧಕ ಶಕ್ತಿ ಬರುತ್ತದೆ, ಸೋಂಕು ತಗುಲಿದರೂ ಅಪಾಯವಿಲ್ಲ ಎಂಬ ತಾತ್ಸಾರ ಭಾವನೆಯಿಂದ ಎರಡನೆ ಡೋಸ್‌ ಪಡೆಯಲು ಅವಧಿ ಮೀರಿದ್ದರೂ ಲಸಿಕಾ ಕೇಂದ್ರಗಳಿಗೆ ಬರುತ್ತಿರಲಿಲ್ಲ. ನ.22 ರಿಂದ ನ.30 ರವರಗೆ ‘ಮನೆ ಮನೆಗೆ ಲಸಿಕಾ ಮಿತ್ರ’ ಕಾರ್ಯಕ್ರಮ ನಡೆಸಿ ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ ಅವರ ಮನವೊಲಿಸಿ ಲಸಿಕೆ ನೀಡುತ್ತಿರುವುದರಿಂದ ಒಂದು ವಾರದಿಂದ ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ.

 ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದು ಹೊರ ಜಿಲ್ಲೆ/ ರಾಜ್ಯಗಳಿಗೆ ತೆರಳಿರುವ ನಾಗರೀಕರು ತಾವು ಇರುವಲ್ಲಿಯೇ 2 ನೇ ಡೋಸ್ ಲಸಿಕೆ ಪಡೆಯಬೇಕು, ಇದುವರೆಗೂ ಪ್ರಥಮ ಡೋಸ್ ಪಡೆಯಲು ಬಾಕಿ ಇರುವ ಹಾಗೂ ಎರಡನೇ ಡೋಸ್ ಪಡೆಯಲು ಅರ್ಹರಿರುವ ಸಾರ್ವಜನಿಕರು ಆದ್ಯತೆಯ ಮೇಲೆ ಲಸಿಕೆ ಪಡೆದರೆ ಉಡುಪಿ ಜಿಲ್ಲೆಯ ಲಸಿಕಾಕರಣದಲ್ಲಿ 100% ಸಾಧನೆ ಮಾಡಲು ಸಾಧ್ಯವಾಗುತ್ತದೆ.

 ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ 2 ಡೋಸ್ ಕೋವಿಡ್ ಲಸಿಕೆ ನೀಡಿ ಅವರನ್ನು ಕೋವಿಡ್ ನಿಂದ ರಕ್ಷಿಸುವುದು ಹಾಗೂ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ , ಮತದಾರರ ಪಟ್ಟಿಯ ಮೂಲಕ ಮನೆ ಮನೆ ಭೇಟಿ ನೀಡಿ ,ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಲಾಗಿದೆ. ಇದುವರೆಗೂ ಲಸಿಕೆ ಪಡೆಯದವರ ಮನವೊಲಿಸಿ ,ಲಸಿಕೆಯ ಮಹತ್ವ ತಿಳಿಸಿ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಸಮುದಾಯಗಳ ಮುಖಂಡರು ,ಸಂಘ ಸಂಸ್ಥೆಗಳೂ ಹಾಗೂ ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರು ಲಸಿಕೆ ಪಡೆಯಲು ಅನುಕೂಲವಾಗುವಂತೆ ಭಾನುವಾರದಂದು ವಿಶೇಷ ಲಸಿಕಾ ಶಿಬಿರ ಆಯೋಜಿಸಲಾಗುತ್ತಿದೆ, ನಮ್ಮ ಜಿಲ್ಲೆಯು ಶೀಘ್ರದಲ್ಲಿ ಲಸಿಕಾಕರಣದಲ್ಲಿ 100% ಗುರಿ ತಲುಪಲಿದೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಲಸಿಕಾ ಕರಣ ಪ್ರಗತಿ

ಲಸಿಕಾ ಮಿತ್ರರು ಜಿಲ್ಲೆಯ ಪ್ರತಿ ಮನೆಗಳಿಗೆ ಮತದಾರರ ಪಟ್ಟಿಯೊಂದಿಗೆ ಭೇಟಿ ನೀಡಿ ಲಸಿಕೆ ಪಡೆದಿರುವ ಹಾಗೂ ಪಡೆಯದಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. 158 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 10,11,885 ಮಂದಿ 18 ವರ್ಷ ಮೇಲ್ಪಟ್ಟವರಿದ್ದು, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಲ್ಲಿ ಜಿಲ್ಲೆಯ 96,377 ಮಂದಿ ಇದ್ದಾರೆ. ಮೃತಪಟ್ಟವರು ಹಾಗೂ ಜಿಲ್ಲೆಯಿಂದ ಹೊರಗಿರುವವರನ್ನು ಹೊರತುಪಡಿಸಿದರೆ 8,97,728 ಮಂದಿ ಪ್ರಥಮ ಡೋಸ್ ಪಡೆಯುವ ಅರ್ಹರಿದ್ದು ಇವರಲ್ಲಿ ಈಗಾಗಲೇ 8,70,423 ಮಂದಿ ಪ್ರಥಮ ಡೋಸ್, 7,38,220 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 27,305 ಮಂದಿ ಪ್ರಥಮ ಡೋಸ್ ಹಾಗೂ 1,32,203 ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದ್ದಾರೆ ಎಂದು ಜಿಲ್ಲಾ ಲಸಿಕಾಧಿಕಾರಿ ಎಂ.ಜಿ.ರಾಮ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು