ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಕಟಾವು ಯಂತ್ರ ಬಾಡಿಗೆ ನಿರ್ಧಾರ ರೈತನದ್ದು- ಭಾರತೀಯ ಕಿಸಾನ್ ಸಂಘ ನಿರ್ಣಯ

Last Updated 27 ಅಕ್ಟೋಬರ್ 2021, 14:17 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಭತ್ತದ ಕಟಾವು ಭರದಿಂದ ಸಾಗಿದ್ದು, ಭತ್ತ ಕಟಾವಿಗೆ ನಿಗದಿಗಿಂತ ಹೆಚ್ಚಿನ ದರ ವಸೂಲು ಮಾಡಲಾಗುತ್ತಿದೆ. ಹಾಗಾಗಿ, ರೈತರೆಲ್ಲರೂ ಸಂಘಟಿತರಾಗಿ ಭತ್ತದ ಕಟಾವು ಯಂತ್ರಗಳ ಬಾಡಿಗೆ ದರವನ್ನು ನಿರ್ಧರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಸಮಿತಿ ಪ್ರದಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.

ಈಚೆಗೆ ನಡೆದ ಸಮಿತಿಯ ಸಭೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಹಲವು ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಯಂತ್ರಧಾರಾ ಯೋಜನೆಯಡಿ ಸರ್ಕಾರದ ಸಹಾಯಧನದಲ್ಲಿ ನಡೆಯುತ್ತಿರುವ ಭತ್ತ ಕಟಾವು ಯಂತ್ರಕ್ಕೆ ಜಿಲ್ಲಾಡಳಿತ ಪ್ರತಿ ಗಂಟೆಗೆ ₹ 1800 ನಿಗದಿಪಡಿಸಿದೆ. ಆದರೆ ಖಾಸಗಿ ಯಂತ್ರಗಳು ಮನಬಂದಂತೆ ಬಾಡಿಗೆ ಪಡೆಯುತ್ತಿವೆ. ಈ ಬಗ್ಗೆ ರೈತರೆಲ್ಲರೂ ಸಂಘಟಿತವಾಗಿ ದರ ನಿರ್ಧರಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಖಾಸಗಿ ಕಟಾವು ಯಂತ್ರ ಸರಬರಾಜುದಾರರಿಂದ ಏಜೆಂಟರು ಕಮಿಷನ್ ಪಡೆಯುತ್ತಿರುವುದರಿಂದ ಬಾಡಿಗೆ ಗಂಟೆಗೆ ₹ 2,700ರವರೆಗೆ ಹೆಚ್ಚಾಗಿದೆ. ರೈತರು ಕರ್ತರ್ ಯಂತ್ರಕ್ಕೆ ಗಂಟೆಗೆ ಗರಿಷ್ಟ ₹ 2,300 ಹಾಗೂ ಕ್ಲಾಸ್ ಯಂತ್ರಕ್ಕೆ ಗರಿಷ್ಟ ₹ 2000 ಮಾತ್ರ ದರ ಪಾವತಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ 36,000 ಹೆಕ್ಟೇರ್ ಭತ್ತದ ಬೆಳೆ ಇದ್ದು, ಯಂತ್ರಧಾರ ಯೋಜನೆಯಡಿ ಕೇವಲ 8 ಭತ್ತದ ಕಟಾವು ಯಂತ್ರಗಳು ಮಾತ್ರ ಜಿಲ್ಲೆಯಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,000 ಹೆಕ್ಟೇರ್ ಪ್ರದೇಶಕ್ಕೆ 14 ಭತ್ತದ ಕಟಾವು ಯಂತ್ರಗಳವೆ. ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದು, ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸರ್ಕಾರ ಕೂಡಲೇ ಮಳೆಯಾಧಾರಿತ ಕೃಷಿಕರಿಗೆ ಇತರ ಜಿಲ್ಲೆಗಳಲ್ಲಿ ನೀಡುವಂತೆ ಪ್ರೋತ್ಸಾಹ ಧನ ನೀಡಬೇಕು. ಬೆಳೆ ನಷ್ಟವಾದ ರೈತರಿಗೆ ವೈಜ್ಞಾನಿಕ ದರದಲ್ಲಿ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಕೇಂದ್ರ ಸರ್ಕಾರ ಭತ್ತಕ್ಕೆ ಕ್ವಿಂಟಲ್‍ಗೆ ₹ 1,940 ಬೆಂಬಲ ಬೆಲೆ ಘೋಷಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ಬೆಂಬಲ ಬೆಲೆ ಸೇರಿಸಿ ಖರೀದಿ ಕೇಂದ್ರ ತೆರೆಯಬೇಕು. ಅತಿ ಹೆಚ್ಚು ಬೆಳೆಯಲಾಗುವ ಎಂಒ–4 ಕೆಂಪು ಜಾತಿಯ ಭತ್ತವನ್ನು ಬೆಂಬಲ ಬೆಲೆ ಪಟ್ಟಿಯಲ್ಲಿ ಸೇರಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‍ಚಂದ್ರ ಜೈನ್ ಹಾಗೂ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT