ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಡಿ.ಅಧಿಕಾರಿ ಪುತ್ಥಳಿ ಲೋಕಾರ್ಪಣೆ ಆ. 15ಕ್ಕೆ

ಪಡುಕುಡೂರಿನ ಕೀರ್ತಿ ಬೆಳಗಿಸಿದ ಸ್ವಾತಂತ್ರ್ಯ ಹೋರಾಟಗಾರ
ಸುಕುಮಾರ್‌ ಮುನಿಯಾಲ್‌
Published 9 ಆಗಸ್ಟ್ 2024, 5:56 IST
Last Updated 9 ಆಗಸ್ಟ್ 2024, 5:56 IST
ಅಕ್ಷರ ಗಾತ್ರ

ಹೆಬ್ರಿ: ದೇಶದಾದ್ಯಂತ ಕ್ವಿಟ್‌ ಇಂಡಿಯಾ ಚಳವಳಿ ಕಾವು ಆವರಿಸಿತ್ತು. ಮಂಗಳೂರಿನ ಕೇಂದ್ರ ಮೈದಾನದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು.  27ರ ಬಿಸಿರಕ್ತದ ತರುಣ ಆವೇಶದಿಂದ ಭಾಷಣ ಮಾಡುತ್ತಿದ್ದರು. ವೇದಿಕೆ ಏರಿದ ಪೊಲೀಸರು ಲಾಠಿ ಬೀಸಿದರು. ರಕ್ತ ಚಿಮ್ಮಿತು. ಕೆಳಗೆ ಬಿದ್ದರೂ ತರುಣನ ಬಾಯಲ್ಲಿ ವಂದೇ ಮಾತರಂ ಘೋಷಣೆ ಮೊಳಗುತ್ತಿತ್ತು. ಪ್ರಜ್ಞೆ ತಪ್ಪಿದ ಯುವಕನನ್ನು ಪೊಲೀಸರು ಎಳೆದುಕೊಂಡು ಹೋಗಿ ಸೆರೆಮನೆಗೆ ಹಾಕಿದರು. ಆ ಯುವಕನೇ ಪಡುಕುಡೂರಿನ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ಪಡುಕುಡೂರುಬೀಡು ಧರ್ಮರಾಜ ಅಧಿಕಾರಿ (ಎಂ.ಡಿ.ಅಧಿಕಾರಿ).

ಕರಾವಳಿಯ ಸ್ವಾತಂತ್ರ್ಯ ಹೋರಾಟದಲ್ಲಿ ಎಂ.ಡಿ.ಅಧಿಕಾರಿ ಪಾತ್ರ ಮಹತ್ವದ್ದು. ಕಾರ್ಕಳ ತಾಲ್ಲೂಕಿನ ವರಂಗದ ಜೈನ ಕೃಷಿ ಕುಟುಂಬದ ಸುಪುತ್ರ. 1937ರಲ್ಲಿ ಪ್ರಾಂತೀಯ ಅಸ್ಲೆಂಬಿ ಚುನಾವಣೆ ನಡೆಯಿತು. ಆಗ ಎಂ.ಡಿ.ಅಧಿಕಾರಿ ಕಾಂಗ್ರೆಸ್‌ ಕಾರ್ಯಕರ್ತನಾಗಿ ಪ್ರಚಾರಕ್ಕೆ ಧುಮುಕಿದ್ದರು. 1938ರಲ್ಲಿ ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ ಅಧ್ಯಕ್ಷರಾದರು. 1940ರಲ್ಲಿ ಅವಿಭಜಿತ ಮಂಗಳೂರು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದರು. 1942ರಲ್ಲಿ ಮಂಗಳೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಸ್ವೀಕರಿಸಿದರು. ಕರಾವಳಿಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ ಮುಂದಾಳತ್ವ ವಹಿಸಿ ಬಳ್ಳಾರಿಯ ಸೆರೆಮನೆಯಲ್ಲಿ 3 ಬಾರಿ ಕಠಿಣ ಜೈಲು ಶಿಕ್ಷೆ ಅನುಭವಿಸಿದರು.

ಧರ್ಮರಾಜ ಅಧಿಕಾರಿ ಅವರ ಹೋರಾಟಕ್ಕೆ ಧರ್ಮಪತ್ನಿ ಕಮಲಾವತಿ ಅಧಿಕಾರಿ ಕೂಡ ಸಾಥ್‌ ನೀಡಿದರು. ಇಬ್ಬರೂ ಸ್ವಾತಂತ್ರ್ಯ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತ ನೆಲೆಯಾದರು. ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ್‌ಬಾ ಹೆಸರಿನಲ್ಲಿ ನಿಧಿ ಸ್ಥಾಪಿಸಿದರು. ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಈಗ ಸಂಘವು ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ.

ಪುತ್ಥಳಿ ಲೋಕಾರ್ಪಣೆ ಆ. 15ಕ್ಕೆ:  ಆ.15ರಂದು ಪಡುಕುಡೂರು ಶಾಲೆಯ ಬಳಿ ವಿಶೇಷ ಪೀಠದಲ್ಲಿ ಎಂ.ಡಿ.ಅಧಿಕಾರಿ ಅವರ ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ. ಅಯೋಧ್ಯೆಯ ಬಾಲರಾಮ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರು ಈ ಪುತ್ಥಳಿ ಕೆತ್ತಿದ್ದಾರೆ.  ಪಡಕುಪರ್ಕಳ ಶಂಕರ ಶೆಟ್ಟಿ ಈ ಪುತ್ಥಳಿ ಯೋಜನೆಯ ಹಿಂದಿನ ರೂವಾರಿ. ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ ಅವರ ನೇತ್ರತ್ವದಲ್ಲಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಕಾರ್ಯನಿರ್ವಹಿಸಿದೆ. ಉಪ ಸಮಿತಿಗಳು, ಊರಿನವರು, ಜನಪ್ರತಿನಿಧಿಗಳು ಸಮಿತಿಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಪುತ್ಥಳಿ ಲೋಕಾರ್ಪಣೆಯಲ್ಲಿ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಂ.ವೀರಪ್ಪ ಮೊಯಿಲಿ ಲೋಕಾರ್ಪಣೆ ಮಾಡುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಎಂ.ಡಿ.ಅಧಿಕಾರಿ ಸುಪುತ್ರಿ ಅಭಯಲಕ್ಷಿ, ಶಾಸಕ ಸುನಿಲ್‌ ಕುಮಾರ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಪ್ರಮೋದ್‌ ಮಧ್ವರಾಜ್‌, ಅಭಯಚಂದ್ರ ಜೈನ್‌, ಎಂ.ಕೆ.ವಿಜಯ ಕುಮಾರ್‌, .ಜಿ.ರಾಮಕೃಷ್ಣ ಆಚಾರ್‌, ಡಾ.ಎಂ.ಎಸ್.ರಾವ್‌ ಮುದ್ರಾಡಿ,  ಜಯರಾಮ ಹೆಗ್ಡೆ ಪಡುಕುಡೂರು ಮತ್ತಿತರರು ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT