ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 11–3–1968

Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೂಷಿಕ ದೇವಾಲಯ
ನವದೆಹಲಿ, ಮಾ. 10–
ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇಲಿಗಳು ಇರುವ ರಾಜ್ಯ ರಾಜಸ್ತಾನ. ಅಲ್ಲಿರುವ ಇಲಿಗಳು ಗಾತ್ರದಲ್ಲಿಯೂ ಅತ್ಯಂತ ದೊಡ್ಡವು. ಇಲಿಗಳನ್ನು ಪೂಜಿಸಲು ಅಲ್ಲಿ ದೇವಾಲಯವೂ ಇದೆ.

ಬಿಕಾನೀರ್‌ನಿಂದ ಎಂಟು ಮೈಲಿ ದೂರದಲ್ಲಿರುವ ದೇಶ್‌ನೌಕ್‌ನಲ್ಲಿ ಮೂಷಕ ದೇವಾಲಯವಿದೆ. ಜನರು ದಿನಕ್ಕೆ 50 ಕಿಲೋ ಆಹಾರ ಧಾನ್ಯಗಳನ್ನು ಈ ದೇವಾಲಯದಲ್ಲಿ ಇಲಿಗಳಿಗೆ ಆರ್ಪಿಸಿ, ಅವುಗಳನ್ನು ಪೂಜಿಸುತ್ತಾರೆ.

ರಾಮನಗರದಲ್ಲಿ ಕೋಮು ಗಲಭೆ
ರಾಮನಗರ, ಮಾ. 10– ಇಂದು ಸಂಜೆ ಇಲ್ಲಿ ನಡೆದ ಮತೀಯ ಘರ್ಷಣೆ ಸಂಬಂಧದಲ್ಲಿ, ಹತೋಟಿ ಮೀರಿದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅಲ್ಲಿಗೂ ಗುಂಪು ಚದುರದಿರಲು ಕೆಲವು ಬಾರಿ ಬೆದರು ಗುಂಡನ್ನು ಹಾರಿಸಲಾಯಿತು.

ಸಂಜೆ, ಇಲ್ಲಿಯ ಶ್ರೀರಾಮ ಚಿತ್ರಮಂದಿರದ ಬಳಿ ಎರಡು ಕೋಮುಗಳ ನಡುವೆ ಆರಂಭವಾದ ಘರ್ಷಣೆ ಪರಿಣಾಮವಾಗಿ ಕೆಲವೇ ನಿಮಿಷಗಳಲ್ಲಿ ಇಡೀ ಟೌನ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ಹಬ್ಬಿ ಜನರು ಭಯಭೀತರಾದರು.

ಯುಗಪುರುಷ ಬಸವೇಶ್ವರರ ಎಂಟನೇ ಶತಮಾನೋತ್ಸವ ನಗರದಲ್ಲಿ ಪ್ರಾರಂಭ
ಬೆಂಗಳೂರು, ಮಾ. 10–
ಸೌಮ್ಯವಾದ ಹಾಗೂ ಮಾನವತೆಯನ್ನು ನುಡಿಯಲ್ಲಿ ಮತ್ತು ನಡೆಯಲ್ಲಿ ತೋರಿಸಿ ಭಿನ್ನ ಭಾವನೆಗಳು ಕೃತಕವೆಂದು ಸಾರಿದ ಯುಗ ಪುರುಷ ಶ್ರೀ ಬಸವೇಶ್ವರರ ಎಂಟನೇ ಶತಮಾನೋತ್ಸವ ಸಮಾರಂಭ ಇಂದು ನಗರದಲ್ಲಿ ವಿಜೃಂಭಣೆಯಿಂದ ಪ್ರಾರಂಭವಾಯಿತು.

ಶಿಶುವಿಹಾರದಿಂದ ಉನ್ನತ ಶಿಕ್ಷಣದ ತನಕ ಕನ್ನಡ ಮಾಧ್ಯಮಕ್ಕೆ ಒತ್ತಾಯ (ಪ್ರಜಾವಾಣಿ ಪ್ರತಿನಿಧಿಯಿಂದ)
ಮೈಸೂರು, ಮಾ. 10– ಶಿಶುವಿಹಾರದಿಂದ ಉನ್ನತ ಶಿಕ್ಷಣದವರೆಗೆ ಕನ್ನಡವನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲು ತತ್‌ಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಯುವಜನ ಸಭಾ ಏರ್ಪಡಿಸಿದ ಒಂದು ದಿನದ ‘ಕನ್ನಡ ಬೆಳೆಸಿ–ಇಂಗ್ಲಿಷ್ ಇಳಿಸಿ’ ಸಮ್ಮೇಳನ ಇಂದು ಇಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಪಡಿಸಿತು.

ಸೋನಿಯಾ ಗಾಂಧಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ನವದೆಹಲಿ, ಮಾ. 10–
ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಸೊಸೆ ಶ್ರೀಮತಿ ಸೋನಿಯಾಗಾಂಧಿಯವರಿಗೆ ಇಂದು ಇಲ್ಲಿನ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಕರುಳಿನ ವ್ಯಾಧಿಗಾಗಿ ಶಸ್ತ್ರ ಚಿಕಿತ್ಸೆ ನಡೆಯಿತು. ಶಸ್ತ್ರಚಿಕಿತ್ಸೆ ಕಾಲದಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಹಾಜರಿದ್ದರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆಯೆಂದು ವೈದ್ಯರ ಪ್ರಕಟಣೆ ತಿಳಿಸಿವೆ.

ಕೇಂದ್ರ ಆರೋಗ್ಯ ಸಚಿವ ಶ್ರೀ ಸತ್ಯನಾರಾಯಣ ಸಿನ್ಹ ಮತ್ತು ಸ್ಟೇಟ್ ಸಚಿವ ಡಾ. ಎಸ್. ಚಂದ್ರಶೇಖರ್ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮತಿ ಸೋನಿಯಾ ಗಾಂಧಿಯವರ ದೇಹಸ್ಥಿತಿ ಬಗ್ಗೆ ವಿಚಾರಿಸಿದರು.

ವಿಜ್ಞಾನವನ್ನು ಕನ್ನಡದಲ್ಲಿ ಕಲಿಸಿ ಇಲ್ಲವೆ ಕುರ್ಚಿ ಬಿಡಿ: ಶಿಕ್ಷಕರಿಗೆ ಮಾಸ್ತಿ ಹಿತೋಕ್ತಿ
ಬೆಂಗಳೂರು, ಮಾ. 10–
ಉನ್ನತ ಮಟ್ಟದಲ್ಲಿ ವಿಜ್ಞಾನವನ್ನು ಕನ್ನಡದಲ್ಲಿಯೇ ಕಲಿಸಲು ಉಪಾಧ್ಯಾಯರು ಮನಸ್ಸು ಮಾಡದಿದ್ದರೆ ಜನ ‘ಕುರ್ಚಿ ಬಿಡಿ, ಬೇರೆಯವರು ಮಾಡುತ್ತಾರೆ’ ಅನ್ನುವರೆಂದು ಮಾಸ್ತಿಯವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ವಿಜ್ಞಾನವನ್ನು ಯಾವ ಮಟ್ಟದಲ್ಲಿಯಾದರೂ ಕನ್ನಡದಲ್ಲಿ ಕಲಿಸಲು ಸಾಧ್ಯವೆಂದ ಅವರು ‘ದಯವಿಟ್ಟು ಮನಸ್ಸು ಮಾಡಿ, ಆಗೋದಿಲ್ಲ ಅಂದರೆ ಜನ ನಿಮಗೆ ‘ಕುರ್ಚಿ ಬಿಟ್ಟು ಬನ್ನಿ’ ಅನ್ನುತ್ತಾರೆ, ನಿಮ್ಮ ಕೆಲಸವನ್ನು ಬೇರೆಯವರು ಮಾಡುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT