ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಯಷ್ಟೆ ಮಾನಸಿಕ ಸ್ಥೈರ್ಯವೂ ಮುಖ್ಯ: ಪರುಶುರಾಮ್‌

ಜಿಲ್ಲಾ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುವ ಆಸ್ಪತ್ರೆ ನೌಕರ
Last Updated 2 ಜುಲೈ 2020, 15:33 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ವೈದ್ಯರಷ್ಟೆ ಮುಖ್ಯ ಪಾತ್ರ ವಹಿಸುವವರು ಶುಶ್ರೂಷಕರು ಹಾಗೂ ‘ಡಿ’ ದರ್ಜೆ ನೌಕರರು. ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡಿದರೆ, ಶುಶ್ರೂಷಕರು ಆರೈಕೆ ಮಾಡುತ್ತಾರೆ. ಮುಖ್ಯವಾಗಿಸೋಂಕು ತಗುಲುವ ಅಪಾಯ ಹೆಚ್ಚಿದ್ದರೂ ದೃತಿಗೆಡದೆ ಸೋಂಕಿತರ ಅಗತ್ಯತೆಗಳನ್ನು ಪೂರೈಸುತ್ತಾರೆ ‘ಡಿ’ ದರ್ಜೆ ನೌಕರರು. ಅಂತಹ ಕೋವಿಡ್‌ ವಾರಿಯರ್ಸ್‌ಗಳಲ್ಲಿ ಪರಶುರಾಮ್ ಕಾಂಬಳೆ‌ ಕೂಡ ಒಬ್ಬರು.

ನಾಲ್ಕು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಪರಶುರಾಮ್‌ ಸದ್ಯ ಐಸೊಲೇಷನ್‌ ವಾರ್ಡ್‌ಗೆ ಕೊರೊನಾ ಶಂಕಿತರನ್ನು ದಾಖಲಿಸುವ, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ವೃತ್ತಿಯ ಸವಾಲುಗಳ ಕುರಿತು ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಶಂಕಿತ ಕೊರೊನಾ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆತರುತ್ತಿರುವ ಬಗ್ಗೆ ಆಸ್ಪತ್ರೆಯ ಸಹಾಯವಾಣಿಗೆ ಕರೆಬಂದ ಕೂಡಲೇ ನನ್ನ ಕರ್ತವ್ಯ ಆರಂಭವಾಗುತ್ತದೆ. ಆಂಬುಲೆನ್ಸ್‌ ಆಸ್ಪತ್ರೆ ಆವರಣ ತಲುಪುವಷ್ಟರಲ್ಲಿ ಪಿಪಿಇ ಕಿಟ್ ಧರಿಸಿ ಸಿದ್ಧನಾಗಬೇಕು. ರೋಗಿ ಬಂದ ಕೂಡಲೇ ನೇರವಾಗಿ ಐಸೊಲೇಷನ್‌ ವಾರ್ಡ್‌ಗೆ ಕರೆದೊಯ್ದು ದಾಖಲಿಸುವುದು ಪ್ರಾಥಮಿಕ ಕೆಲಸ’.

‘ಬಳಿಕ ರೋಗಿಗೆ ದಿಂಬು, ಬೆಡ್‌ಶೀಟ್‌, ಬಿಸಿನೀರು, ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಎಲ್ಲಕಿಂತ ಮುಖ್ಯವಾಗಿ ಅವರ ಮನಸ್ಸಿನಲ್ಲಿ ಕೊರೊನಾ ಬಗ್ಗೆ ತುಂಬಿರುವ ಆತಂಕ ದೂರ ಮಾಡಲು ಯತ್ನಿಸುತ್ತೇನೆ. ಊರು, ವೃತ್ತಿ ಹಾಗೂ ಇತರ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಅವರ ಅಗತ್ಯತೆಗಳನ್ನು ಅರಿತು, ಪೂರೈಸುವ ಕೆಲಸ ಮಾಡುತ್ತೇನೆ’ ಎಂದರು ಪರಶುರಾಮ್‌.

‘ತಾಯಿ ತಂದೆಗಳಿಂದ ಬೇರ್ಪಟ್ಟು ಐಸೊಲೇಷನ್‌ ವಾರ್ಡ್‌ಗೆ ದಾಖಲಾದ ಕಂದಮ್ಮಗಳನ್ನು ನೋಡಿದಾಗ ಸಂಕಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮಕ್ಕಳು ಅತ್ತಾಗ ಸಂತೈಸಿದ್ದೇನೆ, ಎತ್ತಿ ಆಡಿಸಿದ್ದೇನೆ, ಹಠ ಹಿಡಿದಾಗ ಚಾಕ್‌ಲೇಟ್‌ ಕೊಟ್ಟು ಸಮಾಧಾನ ಮಾಡಿದ್ದೇನೆ. ಕೊರೊನಾ ಮಾನವೀಯತೆಯ ಮುಖಗಳನ್ನು ಪರಿಚಯಿಸುತ್ತಿದೆ’ ಎಂದರು ಅವರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾದಾಗ ಆತಂಕವಾಗಿತ್ತು. ಈಗ ಬಹುತೇಕರು ಗುಣಮುಖರಾಗುತ್ತಿದ್ದಾರೆ. ಜಿಲ್ಲೆ ಶೀಘ್ರ ಸೋಂಕು ಮುಕ್ತವಾದರೆಕೊರೊನಾ ವಾರಿಯರ್ಸ್‌ಗಳ ಶ್ರಮಕ್ಕೆ ನಿಜವಾದ ಫಲ ಸಿಕ್ಕಂತಾಗುತ್ತದೆ ಎಂದರು ಪರಶುರಾಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT