ಬುಧವಾರ, ಆಗಸ್ಟ್ 17, 2022
28 °C
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟಿಸಿ ಪೇಜಾವರ ಸ್ವಾಮೀಜಿ ಹೇಳಿಕೆ

‘ರಾಮಮಂದಿರ ನಿರ್ಮಾಣದಲ್ಲಿ ಸಹಭಾಗಿಗಳಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹ ಆರಂಭವಾಗಿದ್ದು, ಭಕ್ತರು ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವ ಮೂಲಕ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಭಾಗಿಗಳಾಗಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ಶನಿವಾರ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಸಹಕಾರದಲ್ಲಿ ಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಭಕ್ತರಿಂದ ಕೂಪನ್ ಹಾಗೂ ರಶೀದಿಯ ಮೂಲಕ ದೇಣಿಗೆ ಸ್ವೀಕರಿಸಲಾಗುವುದು. ಮಕರ ಸಂಕ್ರಾತಿಯಿಂದ ಮಾಘ ಹುಣ್ಣಿಮೆಯವರೆಗೆ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ. ನಿಧಿ ಸಂಗ್ರಹ ದುರ್ಬಳಕೆ ತೆಡೆಯಲು ದೇಣಿಗೆ ಸ್ವೀಕಾರ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್‌ಗೆ ಒಪ್ಪಿಸಲಾಗಿದೆ. ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ನಿಧಿ ಸಂಗ್ರಹಿಸಲಿದ್ದಾರೆ ಎಂದರು.

ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, 1984ರಿಂದ ವಿಎಚ್‌ಪಿ, ಸಂಘ ಪರಿವಾರ ಹಾಗೂ ಸಾಧು ಸಂತರು ಒಟ್ಟಾಗಿ ನಿರಂತರ ಹೋರಾಟ ಮಾಡಿದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪೇಜಾವರ ಮಠದ ಪರ್ಯಾಯದ ಅವಧಿಯಲ್ಲಿ ನಡೆದ ಧರ್ಮಸಂಸತ್‌ನಲ್ಲಿ ತೆಗೆದುಕೊಂಡ ನಿರ್ಣಯ ಈಡೇರುವ ಕಾಲ ಕೂಡಿಬಂದಿರುವುದು ಸಂತಸದ ವಿಚಾರ ಎಂದರು.

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿ ಪೇಜಾವರ ಶ್ರೀಗಳು ರಾಮಮಂದಿರ ನಿರ್ಮಾಣ ಕಾರ್ಯದ ಭಾಗವಾಗಿರುವುದು ಹೆಮ್ಮೆಯ ವಿಚಾರ. ರಾಮಮಂದಿರ ದೇಶ, ರಾಷ್ಟ್ರಕ್ಕೆ ಸಲ್ಲುವ ಗೌರವ. 4 ಲಕ್ಷ ಮಂದಿ ಮಂದಿರಕ್ಕಾಗಿ ದೇಹ ತ್ಯಾಗ ಮಾಡಿದ್ದಾರೆ. ಹಿಂದೂ ಸಮಾಜದ ಶ್ರದ್ಧಾ ಹಾಗೂ ಪ್ರೇಮದ ಸಂಕೇತವಾಗಿ ಮಂದಿರ ನಿರ್ಮಾಣವಾಗಬೇಕು ಎಂದರು. 

ಯುವಕರು ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು. ಜ.15ರಿಂದ ಫೆ.5ರವರೆಗೆ 22 ದಿನ ಅಭಿಯಾನ ನಡೆಯಲಿದ್ದು, ನಂತರ ಲೆಕ್ಕಪತ್ರ ಸಿದ್ಧಪಡಿಸಲು ಕಾರ್ಯಕ್ರಮ ನಡೆಯಲಿದೆ ಎಂಧರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಡಾ. ನಾರಾಯಣ ಶೆಣೈ, ಕುಟುಂಬ ಪ್ರಬೋಧನ್ ಅಖಿಲಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಡಾ.ವಾದಿರಾಜ ಭಟ್, ವಿಎಚ್‌ಪಿ ವಿಭಾಗ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃಮಂಡಳಿ ಅಧ್ಯಕ್ಷೆ ಪೂರ್ಣಿಮಾ ಸುರೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು