ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮ ವಿಭೂಷಣ ಗೌರವ ಹೆಚ್ಚಿಸಿದ ವಿಶ್ವೇಶತೀರ್ಥರು -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ವಿಶ್ವಪ್ರಸನ್ನ ತೀರ್ಥರಿಗೆ ಅದ್ಧೂರಿ ಸ್ವಾಗತ, ಹೂಮಳೆಯೊಂದಿಗೆ ರಥಬೀದಿಯಲ್ಲಿ ಮೆರವಣಿಗೆ
Last Updated 11 ನವೆಂಬರ್ 2021, 14:45 IST
ಅಕ್ಷರ ಗಾತ್ರ

ಉಡುಪಿ: ಯತಿಶ್ರೇಷ್ಠ ವಿಶ್ವೇಶತೀರ್ಥ ಶ್ರೀಗಳಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಗೌರವ ಹೆಚ್ಚಾದಂತಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಥಬೀದಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಶ್ರೀಗಳ ಕುರಿತು ಮಾತನಾಡಿದ ಅವರು, ಪದ್ಮ ವಿಭೂಷಣ ಪ್ರಶಸ್ತಿಯ ಸಂಭ್ರಮ ಒಂದೆಡೆಯಾದರೆ, ಅವರಿಲ್ಲದ ದುಃಖ ಮತ್ತೊಂದು ಕಡೆ ಕಾಡುತ್ತಿದೆ. ಶ್ರೀಗಳೊಂದಿಗೆ ಪ್ರಶಸ್ತಿ ಪಡೆದ ಎಲ್ಲ ಸಾಧಕರಿಗೂ ಮಠದಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಗಳು ಮಾತನಾಡಿ, ವಿಶ್ವೇಶ ತೀರ್ಥರು ಎಲ್ಲ ವರ್ಗದವರಿಗೂ ಬೇಕಾಗಿದ್ದ ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದವರು. ಒಂದು ದಿನವೂ ಪಟ್ಟದ ಪೂಜೆ ಬಿಡಲಿಲ್ಲ, ಸುಧಾ ಪಾಠ ತಪ್ಪಿಸಿದವರಲ್ಲ. ಪಾಠ, ಪ್ರವಚನದ ಜತೆಗೆ ಭಕ್ತರು ಕರೆದಲ್ಲಿಗೆ ತಪ್ಪದೆ ಭೇಟಿನೀಡುತ್ತಿದ್ದ ಅಪರೂಪದ ಯತಿಗಳು ಎಂದು ಸ್ಮರಿಸಿದರು.

ಹಿಂದೂ ಧರ್ಮ ವಿಚಾರಗಳು ಬಂದಾಗ ತಕ್ಷಣ ಸ್ಪಂದಿಸುತ್ತಿದ್ದ ವಿಶ್ವೇಶತೀರ್ಥ ಶ್ರೀಗಳು ಸರ್ವ ಧರ್ಮದವರಿಗೂ ಬೇಕಾದ ಜಾತಿ, ಮತ ಮೀರಿದ ಸಂತರು. ಅವರ ಸಾಧನೆಗೆ ಪ್ರತಿಫಲವಾಗಿ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದರೂ ಎಂದೂ ಬೀಗಿದವರಲ್ಲ ಎಂದು ಗುಣಗಾನ ಮಾಡಿದರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ’ವಿಶ್ವೇಶತೀರ್ಥ ಶ್ರೀಗಳ ತಪ್ಪಸ್ಸು, ಅಧ್ಯಯನ, ಸಮಾಜಮುಖಿ ಚಿಂತನೆಗಳು ಪದ್ಮ ವಿಭೂಷಣ ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಬರುವಂತಾಯಿತು ಎಂದರು.

ಸೇವೆ ಮಾಡುವಾಗ ಪ್ರತಿಫಲ ಅಪೇಕ್ಷಿಸುವುದು ಬೇಡ ಎಂಬ ಸತ್ಯವನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಶಾಸ್ತ್ರ ವಿಮರ್ಶೆ, ಸಮಾಜಸೇವೆ, ಧಾರ್ಮಿಕ ಕಾರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣ ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವೇಶ ತೀರ್ಥ ಶ್ರೀಗಳಿಗೆ ಪದ್ಮ ವಿಭೂಷಣ ಸಿಕ್ಕಿರುವುದು ಸಕಲ ಆಸ್ತಿಕ ಸಮಾಜಕ್ಕೆ ಸಂದ ಪ್ರಶಸ್ತಿಯಾಗಿದೆ. ಸಮಾಜ ಎಂಬ ನೀರಿನ ಮಧ್ಯೆ ನಿಂತು ಕಲ್ಮಶಗಳನ್ನು ಸೋಂಕಿಸಿಕೊಳ್ಳದೆ ಕಮಲದಂತೆ ಶುಭ್ರವಾಗಿ ಬದುಕಿದವರು ಶ್ರೀಗಳು ಎಂದು ಸ್ಮರಿಸಿದರು.

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಉಪಸ್ಥಿತರಿದ್ದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

‘ಮೋದಿಯನ್ನು ಹೊಗಳಿದ ಮಧ್ವರಾಜ್‌’
ಹಿಂದೆ ಅರ್ಜಿ ಹಾಕಿದವರಿಗಷ್ಟೆ ಪ್ರಶಸ್ತಿಗಳು ಸಿಗುತ್ತಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪಶ್ರಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ. ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷ ಉತ್ತಮ ಕಾರ್ಯಗಳನ್ನು ಮಾಡಿದಾಗ ಶ್ಲಾಘಿಸಬೇಕಿರುವುದು ಕರ್ತವ್ಯ ಎಂದು ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ನೆರೆದಿದ್ದ ಎಲ್ಲರನ್ನೂ ಚಕಿತಗೊಳಿಸಿದರು.

‘ಅದ್ಧೂರಿ ಸ್ವಾಗತ’
ಪದ್ಮ ವಿಭೂಷಣ ಪ್ರಶಸ್ತಿಯೊಂದಿಗೆ ಉಡುಪಿಗೆ ಆಗಮಿಸಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಭಕ್ತರು ಹಾಗೂ ಅಭಿಮಾನಿಗಳು ಚಂಡೆ ಮಂಗಳವಾದ್ಯ ಸಹಿತ ಅದ್ಧೂರಿಯಾಗಿ ಸ್ವಾಗತ ಕೋರಿದರು. ತೆರೆದ ಚೀಪಿನಲ್ಲಿ ವಿಶ್ವೇಶ ತೀರ್ಥ ಶ್ರೀಗಳ ಭಾವಚಿತ್ರವಿಟ್ಟು ಮೆರವಣಿಗೆ ಮೆರವಣಿಗೆ ಮಾಡಲಯಿತು. ಸಂಸ್ಕೃತ ವಿದ್ಯಾಲಯದಿಂದ ಆರಂಭವಾದ ಮೆರವಣಿಗೆಯಲ್ಲಿ ಶ್ರೀಗಳು ಪ್ರಶಸ್ತಿಯೊಂದಿಗೆ ರಥಬೀದಿಯ ಸುತ್ತ ಸಾಗಿ ಬಳಿಕ ಪೇಜಾವರ ಮಠಕ್ಕೆ ತೆರಳಿ ವಿಶ್ವೇಶ ತೀರ್ಥ ಶ್ರೀಗಳ ಭಾವಚಿತ್ರದ ಮುಂದೆ ಪದ್ಮ ವಿಭೂಷಣ ಪ್ರಶಸ್ತಿಯನ್ನಿಟ್ಟು ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT