ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ಮಕ್ಕಳ ಕಳ್ಳರ ವದಂತಿಗೆ ಪೊಲೀಸ್ ಇಲಾಖೆ ಸ್ಪಷ್ಟನೆ

Published 23 ಜುಲೈ 2023, 13:46 IST
Last Updated 23 ಜುಲೈ 2023, 13:46 IST
ಅಕ್ಷರ ಗಾತ್ರ

ಕುಂದಾಪುರ: ‘ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೇಶ್ವರ, ಕಾಳಾವರ ಹಾಗೂ ನಗರದ ಬರೇಕಟ್ಟು ಎನ್ನುವ ಪರಿಸರದಲ್ಲಿ ಈಚೆಗೆ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನ ನಡೆದಿದೆ ಎನ್ನುವ ವದಂತಿ ಹಾಗೂ ಹರಿದಾಡುತ್ತಿರುವ ಫೋಟೊ, ವಿಡಿಯೊ ಇವು ಸತ್ಯಕ್ಕೆ ದೂರವಾಗಿದ್ದು, ಈ ರೀತಿಯ ಪ್ರಕರಣಗಳು ನಡೆದಿಲ್ಲ’ ಎಂದು ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಟೇಶ್ವರ, ಕಾಳಾವರ ಪರಿಸರದಲ್ಲಿ ಕಾರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ತಕ್ಷಣ ಕಾರ್ಯ ಪ್ರವೃತ್ತರಾದ ಕುಂದಾಪುರ ನಗರ ಠಾಣಾ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ ಏನೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಅಥವಾ ತುರ್ತು ಕರೆ ಸಂಖ್ಯೆ 112ಗೆ ಕರೆ ಮಾಡುವಂತೆ ಡಿವೈಎಸ್ಪಿ ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಈಚೆಗೆ ಕುಂದಾಪುರ ಬರೇಕಟ್ಟು ರಸ್ತೆಯಲ್ಲಿ ಮಕ್ಕಳಿಗೆ ಆಟಿಕೆ ಆಸೆ ತೋರಿಸಿ ಮಕ್ಕಳನ್ನು ಕರೆಯುವ ವಿಡಿಯೊ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಚಾರವು ಕೂಡ ಸುಳ್ಳು ಸುದ್ದಿಯಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಪಂದಿಸಿದ ಕುಂದಾಪುರ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಿದ್ದು, ಇದರಲ್ಲಿ ಯಾವುದೇ ದುರುದ್ದೇಶ ಕಂಡು ಬಂದಿಲ್ಲ.

ಈ ರೀತಿಯ ಘಟನೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳಿದ್ದಲ್ಲಿ ಕುಂದಾಪುರ ಠಾಣೆಯ ದೂರವಾಣಿ ಸಂಖ್ಯೆ 08254-230338 ಅನ್ನು ಸಂಪರ್ಕಿಸಲು ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ನಂದಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT