ಉಡುಪಿ: ಜಿಲ್ಲೆಯ ಶಿಕ್ಷಕರಿಗಾದ ಅನ್ಯಾಯ ವಿರೋಧಿಸಿ ನ್ಯಾಯಯುತ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಧೋರಣೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯು ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದು, ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ನೀಡಿದ್ದ ಪ್ರಚೋದನಕಾರಿ ಹೇಳಿಕೆ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಿಗೆ ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಸಿದ್ದರೂ ಪೊಲೀಸ್ ಇಲಾಖೆಯು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಲ್ಲ.
ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿರುವ ಕಾಂಗ್ರೆಸ್ ನಾಯಕರು ಸಂವಿಧಾನ ದತ್ತವಾದ ಹುದ್ದೆಯಲ್ಲಿರುವ ರಾಜ್ಯಪಾಲರು ಹಾಗೂ ದೇಶದ ಪ್ರಧಾನಿ ಅವರನ್ನು ತುಚ್ಛ ಹೇಳಿಕೆಗಳ
ಮೂಲಕ ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿದ ಘೋರ ಅಪಚಾರವಲ್ಲವೇ? ಹಗರಣಗಳ ಕೂಪದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ವಿರುದ್ಧ ಇಂತಹ ಷಡ್ಯಂತ್ರಗಳಲ್ಲಿ ತೊಡಗಿರುವುದು ಖಂಡನೀಯ ಎಂದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಜಾಮೀನು ಪಡೆದು ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಮೂದಲಿಸುವ ಜೊತೆಗೆ ಶತ್ರು ರಾಷ್ಟ್ರವನ್ನು ಹೊಗಳುತ್ತಾ ಭಾರತವನ್ನು ತೆಗಳುವ ಕೀಳು ಮಟ್ಟಕ್ಕೆ ಇಳಿದಿರುವುದು ದೇಶದ ಬಗ್ಗೆ ಕಾಂಗ್ರೆಸ್ಸಿಗರಿಗೆ ಇರುವ ಕೀಳರಿಮೆಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ರಸ್ತೆಗಳಿಗೆ ತೇಪೆ ಹಾಕಲಿಕ್ಕೂ ಹಣವಿಲ್ಲದ ದುಃಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೂ ಚಿಕ್ಕಾಸು ಬಿಡುಗಡೆ ಮಾಡದೆ ಓಲೈಕೆ ರಾಜಕಾರಣದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಹಿಜಾಬ್ ಪ್ರಕರಣದ ನೆಪವನ್ನು ಮುಂದಿಟ್ಟುಕೊಂಡು, ಕುಂದಾಪುರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಣೆಯಾಗಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದಿರುವ ಸರ್ಕಾರವು ಆಗಿರುವ ಪ್ರಮಾದವನ್ನು ತಕ್ಷಣ ಸರಿಪಡಿಸಬೇಕು. ಅನ್ಯಾಯದ ವಿರುದ್ಧ ಬಿಜೆಪಿಯ ಜನಪರ ಹೋರಾಟ ಎಂದಿಗೂ ನಿಲ್ಲದು ಎಂದು ಕಿಶೋರ್ ಕುಮಾರ್ ಹೇಳಿಕೆಯಲ್ಲಿ
ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.