ಶನಿವಾರ, ಅಕ್ಟೋಬರ್ 16, 2021
29 °C
ಉಡುಪಿಯಲ್ಲಿ ಪೊಲೀಸ್ ವಸತಿಗೃಹ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

100 ಪೊಲೀಸ್ ಠಾಣೆಗಳ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: 2025ರೊಳಗೆ 10,000 ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಹಾಗೂ ₹ 200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ ಹಾಗೂ 140 ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ನಗರದ ಮಿಷನ್ ಕಾಂಪೌಂಡ್ ಬಳಿ ₹ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 56 ಮನೆಗಳ ಪೊಲೀಸ್ ವಸತಿ ಸಮುಚ್ಛಯವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯ ಬಲವರ್ಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೈಬರ್ ಅಪರಾಧಗಳನ್ನು ಬೇಧಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಜತೆಗೆ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಣ ಕಳೆದುಕೊಂಡ ವ್ಯಕ್ತಿ 2 ಗಂಟೆಯೊಳಗೆ ದೂರು ನೀಡಿದರೆ, ಹಣ ಮರಳಿ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದರು.

ಸೈಬರ್ ಅಪರಾಧಗಳು ನಡೆದಾಗ ಲಿಖಿತ ದೂರು ನೀಡಲು ಸಾಧ್ಯವಾಗದಿದ್ದರೆ ಪೊಲೀಸ್ ಸಹಾಯವಾಣಿ 112 ಕರೆಮಾಡಿ ದೂರು ಸಲ್ಲಿಸಬಹುದು. ಅಪರಾಧ ಕೃತ್ಯಗಳು ನಡೆದಾಗ ಹಾಗೂ ಪೊಲೀಸರ ಅಗತ್ಯವಿದ್ದಾಗ ಸಾರ್ವಜನಿಕರು ಕೂಡ ಕರೆ ಮಾಡಬಹುದು ಎಂದರು.

ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವಾಗ ಅಗ್ನಿಶಾಮಕ ಇಲಾಖೆಯ ನಿರಕ್ಷೇಪಣಾ ಪತ್ರ ಮತ್ತು ಕಟ್ಟಡ ಮುಕ್ತಾಯವಾದ ಬಳಿಕ ಕ್ಲಿಯರೆನ್ಸ್ ಪತ್ರ ಪಡೆಯುವುದು ಕಡ್ಡಾಯ. ಈಚೆಗೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕ 15,000 ಬಹುಮಹಡಿ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪತ್ರವನ್ನೇ ಪಡೆಯಲಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಎಎಸ್‌ಐ ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿ ನಡೆಯುತ್ತಿದ್ದು, ಹಣ ಕೊಟ್ಟರೆ ನೇಮಕಾತಿ ಆಗುತ್ತದೆ ಎಂಬುದು ಸುಳ್ಳು. ಪೊಲೀಸ್ ಇಲಾಖೆ ಖರೀದಿಯ ಸರಕಲ್ಲ. ಯೋಗ್ಯತೆ ಹಾಗೂ ಮೆರಿಟ್ ಇದ್ದವರಿಗೆ ಮಾತ್ರ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುತ್ತದೆ ಎಂದು ಅರಗ ಜ್ಞಾನೇಂದ್ರ ಹೇಳಿದರು. ‌

ಪಶ್ಚಿಮ ವಲಯ ಪೊಲೀಸ್ ಮಹಾ ನಿರ್ದೇಶಕ ದೇವಜ್ಯೋತಿ ರೇ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ದಶಕದ ಹಿಂದಿದ್ದ ಕೆಟ್ಟ ಪರಿಸ್ಥಿತಿ ಸುಧಾರಿಸಿದ್ದು ಹೆಚ್ಚಿನ ಅಭಿವೃದ್ಧಿಯಾಗಿದೆ. ಉತ್ತಮ ತರಬೇತಿ, ಕೆಲಸದ ವಾತಾವರಣ ಹಾಗೂ ಸಿಬ್ಬಂದಿಗೆ ವಸತಿ ಗೃಹಗಳನ್ನು ನೀಡಲಾಗಿದೆ. ಅಪರಾಧ ಪ್ರಮಾಣವೂ ತಗ್ಗಿದೆ ಎಂದರು.

ಗುತ್ತಿಗೆದಾರ ಜಯರಾಜ್ ಬಿ. ಶೆಟ್ಟಿ ಮತ್ತು ಕಾರ್ಯಕಾರಿ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು. ಕಾಪು ಶಾಸಕ ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್. ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್, ಎಎನ್ಎ ಹಾಗೂ ಸಿಎಸ್‌ಪಿ ಎಸ್‌ಪಿ ನಿಖಿಲ್ ಇದ್ದರು ಉಪಸ್ಥಿತರಿದ್ದರು.

ಎಸ್‌ಪಿ ಎನ್.ವಿಷ್ಣುವರ್ಧನ್ ಸ್ವಾಗತಿಸಿದರು. ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ವಂದಿಸಿದರು. ಬಿ.ಮನಮೋಹನ ರಾವ್ ಹಾಗೂ ವಕೀಲ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.