ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಮಾರಣಾಂತಿಕವಲ್ಲ; ಜಾಗ್ರತೆಯೇ ಮದ್ದು’

ಕೊರೊನಾ ವಿರುದ್ಧ ಹೋರಾಡಿ ಗೆದ್ದುಬಂದ ಯೋಗೀಶ್ ವಿ.ಸಾಲ್ಯಾನ್‌
Last Updated 18 ಜುಲೈ 2020, 16:41 IST
ಅಕ್ಷರ ಗಾತ್ರ

ಉಡುಪಿ:‌ಕೊರೊನಾ ಬಗ್ಗೆ ಭಯಬೇಡ; ಜಾಗ್ರತೆ ಇರಲಿ. ಸೋಂಕು ತಗುಲಿದ ಮೇಲೆ ಚಿಂತಿಸುವ ಬದಲು; ಸೋಂಕು ಬಾರದಂತೆ ಎಚ್ಚರವಹಿಸಿದರೆ ವೈಯಕ್ತಿಕವಾಗಿ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಒಳಿತು ಎಂದರು ವಡಬಾಂಢೇಶ್ವರ ವಾರ್ಡ್‌ನ ಕೌನ್ಸಿಲರ್ ಯೋಗೀಶ್‌ ವಿ.ಸಾಲ್ಯಾನ್‌.

ಕೋವಿಡ್‌ ವಿರುದ್ಧ ಹೋರಾಡಿ ಗುಣಮುಖರಾಗಿ ಸಧ್ಯ ಹೋಂ ಕ್ವಾರಂಟೈನ್‌ನಲ್ಲಿರುವ ಯೋಗೀಶ್ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಜುಲೈ 4ರಂದು ಸೋಂಕು ತಗುಲಿ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾದಾಗ ಮನಸ್ಸಿನಲ್ಲಿ ಅಳುಕಿತ್ತು. ಆದರೆ, ಅಲ್ಲಿನ ಚಿಕಿತ್ಸಾ ಕ್ರಮ, ವೈದ್ಯರ ಹಾಗೂ ಶುಶ್ರೂಷಕರ ಕಾಳಜಿ ಕಂಡು ಕೊರೊನಾ ಬಗ್ಗೆ ಮನಸ್ಸಿನಲ್ಲಿದ್ದ ಅಳುಕು ಸಂಪೂರ್ಣ ಬದಲಾಯಿತು’.

‘ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಮಹಾಮಾರಿ, ರಣಕೇಕೆ, ರುದ್ರನರ್ತನ ಎಂಬೆಲ್ಲ ವರದಿಗಳನ್ನು ನೋಡಿ ಜನಸಾಮಾನ್ಯರಲ್ಲಿ ಭಯ ತುಂಬಿಕೊಂಡಿದೆ. ಜನರಲ್ಲಿರುವ ಭಯ ನಿವಾರಣೆಯಾದರೆ ಸೋಂಕಿನಿಂದ ಬಹುತೇಕ ಗುಣಮುಖರಾದಂತೆ ಎಂದರು ಯೋಗೀಶ್‌.

ಕೊರೊನಾ ಬಂದರೆ ಬದುಕು ಮುಗಿಯಿತು ಎಂಬ ಭಯಬೇಡ. ಸೋಂಕಿಗೆ ಹೆದರುವ ಅಗತ್ಯವಿಲ್ಲ. ಮಾನಸಿಕ ಸ್ಥೈರ್ಯವೇ ಕೊರೊನಾಗೆ ಪರಿಣಾಮಕಾರಿ ಔಷಧ’ ಎಂದರು ಅವರು.

ರೋಗದ ಲಕ್ಷಣಗಳು ಆಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಿತ್ಯ ಪೌಷ್ಟಿಕ ಆಹಾರ ನೀಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕವಾಗಿ ಸ್ಥೈರ್ಯ ತುಂಬುತ್ತಾರೆ ಎಂದು ಆಸ್ಪತ್ರೆಯ ಚಿಕಿತ್ಸಾ ವಿಧಾನವನ್ನು ವಿವರಿಸಿದರು.

‘ಜನಪ್ರತಿನಿಧಿಯಾಗಿ ಸದಾ ಜನಗಳ ಮಧ್ಯೆ ಇರುತ್ತಿದ್ದ ನನಗೆ ಆಸ್ಪತ್ರೆಯಲ್ಲಿ ಒಂಟಿಯಾಗಿರುವುದು ಸ್ವಲ್ಪ ಕಷ್ಟವಾಯಿತು. ಅಲ್ಲಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರೂಢಿಸಿಕೊಂಡ ಬಳಿಕ ಕೊರೊನಾ ಬಗ್ಗೆ ಯೋಚಿಸಲೂ ಸಮಯ ಸಿಗಲಿಲ್ಲ’ ಎಂದರು ಅವರು.

ಆಸ್ಪತ್ರೆಯಲ್ಲಿದ್ದುಕೊಂಡು ಕರಾವಳಿಯ ಮತ್ಸ್ಯೋದ್ಯಮದ ಮೇಲೆ ಕೊರೊನಾ ಬೀರಿರುವ ಪರಿಣಾಮ ಹಾಗೂ ಮುಂದೆ ಸೋಂಕಿನ ವಿರುದ್ಧ ಹೋರಾಡುತ್ತಲೇ ಮುಂದೆ ಬದುಕು ಕೊಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಕುರಿತು ವಿಡಿಯೋ ಮಾಡಿದ್ದೇನೆ. ಇದು ತುಂಬಾ ಖುಷಿಕೊಟ್ಟಿತು ಎಂದರು ಯೋಗೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT