ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಭತ್ಯೆ ಹೆಚ್ಚಳಕ್ಕೆ ಮನವಿ

ಪೌರ ಕಾರ್ಮಿಕರ ದಿನಾಚರಣೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್
Last Updated 23 ಸೆಪ್ಟೆಂಬರ್ 2021, 12:31 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯಲ್ಲಿ ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ವಿವಿಧ ಭತ್ಯೆಗಳನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದರು.

ನಗರದ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಉಡುಪಿ ನಗರದಲ್ಲಿ 293 ಪೌರ ಕಾರ್ಮಿಕರಿದ್ದು, ಪ್ರತಿನಿತ್ಯ ನಗರದ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿದ್ದಾರೆ. ಪೌರ ಕಾರ್ಮಿಕರ ಭತ್ಯೆಗಳನ್ನು ಹೆಚ್ಚಿಸುವಂತೆ ಹಾಗೂ ಬೆಳಗಿನ ಉಪಹಾರದ ಭತ್ಯೆಯನ್ನೂ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಕಾರ್ಮಿಕರು ಕೆಲಸದ ವೇಳೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ ವಹಿಸದೆ ಕೆಲಸ ಮಾಡಬೇಕು. ಕರ್ತವ್ಯಕ್ಕೆ ಗೈರಾಗದೆ ಉಡುಪಿ ನಗರಸಭೆ ದೇಶದಲ್ಲಿಯೇ ಉತ್ತಮ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ಎಂಬ ಹಿರಿಮೆ ಸಿಗಲು ಶ್ರಮಿಸಬೇಕು ಎಂದು ಸಹಲೆ ನೀಡಿದರು.

ನಗರಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಶುಚಿಯಾಗಿಡುತ್ತಿರುವ ಪೌರ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಿರುವುದು ಎಲ್ಲರ ಹೊಣೆ ಎಂದು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹೇಳಿದರು.

ಸಾರ್ವಜನಿಕರು ಏಳುವ ಮುನ್ನವೇ ನಗರದ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಮಳೆ, ಚಳಿ, ಬಿಸಿಲು ಎನ್ನದೆ ವರ್ಷಪೂರ್ತಿ ದುಡಿಯುತ್ತಾರೆ. ಪೌರಕಾರ್ಮಿಕರ ಆರೋಗ್ಯ ಕಾಪಾಡುವುದರ ಜೊತೆಗೆ ಅವರ ಜೀವನವನ್ನು ಭದ್ರಗೊಳಿಸಬೇಕಿದೆ. ಪೌರಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯದೆ ಉತ್ತಮ ಶಿಕ್ಷಣ ಪಡೆಯಬೇಕು.

ಸರ್ಕಾರ ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಶೈಕ್ಷಣಿಕ ಸೌಲಭ್ಯಗಳು, ಶಿಷ್ಯವೇತನ ನೀಡುತ್ತಿದ್ದು, ಖಾಸಗಿ ಶಾಲಾ-ಕಾಲೇಜುಗಳಲ್ಲಿಯೂ ಉಚಿತ ಶಿಕ್ಷಣ ದೊರೆಯುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿರುವ ನಿರ್ವಸತಿ ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸಲು ಸರ್ಕಾರ ಗೃಹ ಭಾಗ್ಯ, ಪ್ರಧಾನ ಮಂತ್ರಿ ಆವಾಸ ಯೋಜನೆಗಳಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಅನಕ್ಷರಸ್ಥ ಪೌರಕಾರ್ಮಿಕರಿಗೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಪೌರಕಾರ್ಮಿಕರು ಕೋವಿಡ್ ಸಾಂಕ್ರಾಮಿಕದ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಗರದ ಸ್ವಚ್ಛತೆಗೆ ಆಧ್ಯತೆ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತಿ ವರ್ಷ ನೀಡುತ್ತಿರುವ ವಿಶೇಷ ಭತ್ಯೆಯನ್ನು ₹ 3,500 ರಿಂದ ₹ 7,000ಕ್ಕೆ ಹೆಚ್ಚಿಸಲಾಗಿದೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಉದಯ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನಾ ಆರೋಗ್ಯ ರಕ್ಷಣೆಗೆ ಪೌರಕಾರ್ಮಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಯಿತು. ನಿವೃತ್ತಿ ಅಂಚಿನಲ್ಲಿರುವ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ನಗರ ಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಶ್ರೀಕೃಷ್ಣರಾವ್ ಕೊಡಂಚ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮನೋಹರ್, ಮ್ಯಾಜಿಷಿಯನ್ ಗಣೇಶ್ ಕುದ್ರೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT