ಗುರುವಾರ , ಫೆಬ್ರವರಿ 20, 2020
29 °C
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ದಸಂಸ, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಉಡುಪಿ| ದೇಶ ಒಡೆಯತ್ನಿಸಿದರೆ ಒಟ್ಟಾಗಿ ಕಟ್ಟೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಬಿಜೆಪಿ ಗೋಲ್ವಾಲ್ಕರ್, ಗೋಡ್ಸೆ, ಸಾವರ್ಕರ್ ಸಿದ್ಧಾಂತಗಳಿಂದ ದೇಶ ಒಡೆಯಲು ಯತ್ನಿಸಿದರೆ, ನಾವೆಲ್ಲರೂ ಅಂಬೇಡ್ಕರ್ ಸಂವಿಧಾನದ ಬುನಾದಿಯ ಮೇಲೆ ದೇಶವನ್ನು ಕಟ್ಟೋಣ’ ಎಂದು ಪ್ರಗತಿಪರ ಚಿಂತಕ ಯಾಸಿನ್ ಮಲ್ಪೆ ಕರೆ ನೀಡಿದರು.

ಶುಕ್ರವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಸಿಎಎ, ಎನ್‌ಆರ್‌ಸಿ ಮುಸ್ಲಿಮರ ವಿರೋಧಿ ಮಾತ್ರವಲ್ಲ; ದಲಿತರ, ಆದಿವಾಸಿಗಳ, ಬಡವರ ವಿರೋಧಿ. ದಶಕಗಳಿಂದ ಬದುಕು ಕಟ್ಟಿಕೊಂಡವರನ್ನು ನಿರ್ವಸತಿಗರನ್ನಾಗಿ ಮಾಡುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.‌

ಚಿಂತಕ ಜಿ.ರಾಜಶೇಖರ್ ಮಾತನಾಡಿ, ‘ಅಂಬೇಡ್ಕರ್ ಸ್ಮರಣೆ ಎಂದರೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಎಂದರ್ಥ. ಇದಕ್ಕೆ ವಿರುದ್ಧವಾಗಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ನೋಂದಣಿ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಮುಸ್ಲಿಮೇತರರಿಗೆ ಮಾತ್ರ ಕಾಯ್ದೆಯಡಿ ಪೌರತ್ವ ನೀಡಿದರೆ, ಶ್ರೀಲಂಕಾ ಯುದ್ಧ ದೌರ್ಜನ್ಯಕ್ಕೆ ಸಿಲುಕಿ ಭಾರತಕ್ಕೆ ವಲಸೆ ಬಂದ ಮುಸ್ಲಿಮರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ಮುಖಂಡ ಅಮೃತ್ ಶೆಣೈ ಮಾತನಾಡಿ, ಯುವಜನರ ಮನಸ್ಸಿನಿಂದ ಅಂಬೇಡ್ಕರ್, ಗಾಂಧಿ, ನೆಹರೂ ಅವರಂಥ ಮಹನೀಯರನ್ನು ಮರೆಯಾಗಿಸಿ, ಗೋಡ್ಸೆ, ಸಾವರ್ಕರ್ ಅವರಂಥ ಹೇಡಿಗಳ ಪ್ರತಿಮೆಗಳನ್ನು ಬಿಜೆಪಿ ಪ್ರತಿಷ್ಠಾಪಿಸುತ್ತಿದೆ ಎಂದು ಟೀಕಿಸಿದರು.

ಸಿಎಎ ಮುಸ್ಲಿಮರ ವಿರೋಧಿ ಮಾತ್ರವಲ್ಲ, ಬಡವರ ಹಾಗೂ ದಶಕಗಳಿಂದ ದೇಶದಲ್ಲಿದ್ದರೂ ದಾಖಲೆಗಳಿಲ್ಲದವರ ವಿರೋಧಿಯಾಗಿದೆ. ದೇಶವನ್ನು ಪ್ರೀತಿಸುವವರು, ಅಂಬೇಡ್ಕರ್ ಅವರನ್ನು ಗೌರವಿಸುವವರು ಇದೇ 30ರಂದು ನಡೆಯುವ ಸಿಎಎ ವಿರೋಧಿ ಸಮಾವೇಶಕ್ಕೆ ಬೆಂಬಲ ನೀಡಬೇಕು ಎಂದರು.

ಪತ್ರಕರ್ತ ಶಶಿಧರ್ ಹೆಮ್ಮಾಡಿ ಮಾತನಾಡಿ, ‘ರೈಲು ನಿಲ್ದಾಣವೇ ಇಲ್ಲದ ಕಡೆ ಚಹಾ ಮಾರಿದವರು, ಸಹಪಾಠಿಗಳೇ ಇಲ್ಲದ ಕಾಲೇಜಿನಿಂದ ಪದವಿ ಪಡೆದ ಪ್ರಧಾನಿ ದೇಶದ ಜನರ ಬಳಿ ಪೌರತ್ವ ಸಾಬೀತು ಪಡಿಸುವಂತೆ ದಾಖಲೆಗಳನ್ನು ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.

ಚುನಾವಣೆಯಲ್ಲಿ ಮತದಾರರ ಗುರುತಿನ ಪತ್ರ ತೋರಿಸಿ ಮತದಾರರು ಮತ ಹಾಕಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಪೌರತ್ವ ಸಾಬೀತಿಗೆ ವೋಟರ್ ಐಡಿ ಅಧಿಕೃತವಲ್ಲ ಎಂದಾದರೆ, ಅಧಿಕಾರ ತ್ಯಜಿಸಿ ಎಂದು ಸವಾಲು ಹಾಕಿದರು.

ದೇಶ ಸಂಕಷ್ಟದ ಕಾಲಘಟ್ಟದಲ್ಲಿದೆ. ಭಾರತೀಯರಿಗೆ ಪೌರತ್ವವನ್ನು ಸಾಬೀತು ಮಾಡಬೇಕಾದ ದುಸ್ಥಿತಿ ಬಂದಿದೆ. ಪ್ರತಿ ಮನೆಮನೆಗೂ ತೆರಳಿ ಸಿಎಎ, ಎನ್‌ಆರ್‌ಸಿಯಿಂದ ಆಗುವ ತೊಂದರೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಮುಖಂಡರಾದ ರಮೇಶ್‌ ಕಾಂಚನ್‌, ಫಾದರ್ ವಿಲಿಯಂ ಮಾರ್ಟಿಸ್‌ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು