ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ‘ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸಲಿ’

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ
Published : 25 ಸೆಪ್ಟೆಂಬರ್ 2024, 5:29 IST
Last Updated : 25 ಸೆಪ್ಟೆಂಬರ್ 2024, 5:29 IST
ಫಾಲೋ ಮಾಡಿ
Comments

ಉಡುಪಿ: ಹೈಕೋರ್ಟ್‌ ತೀರ್ಪಿಗೆ ತಲೆಬಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಲಿ. ತನಿಖೆಯನ್ನು ಎದುರಿಸಿ ದೋಷಮುಕ್ತರಾದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಲಿ. ಮೇಲ್ಮನವಿ ಸಲ್ಲಿಸುವ ಬದಲಾಗಿ, ನ್ಯಾಯಾಂಗಕ್ಕೆ ಗೌರವ ನೀಡಲಿ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿರುವುದು ನ್ಯಾಯಾಂಗ ವ್ಯವಸ್ಥೆ. ಮುಡಾ ಪ್ರಕರಣದ ತೀರ್ಪಿನಿಂದಾಗಿ ನ್ಯಾಯಾಂಗದ ಮೇಲಿನ ನಂಬಿಕೆ ಗಟ್ಟಿಯಾಗಿದೆ ಎಂದರು.

ಮುಖ್ಯಮಂತ್ರಿ ಅವರಿಗೆ ರಾಜ್ಯದ ಜನತೆಯ ಮೇಲೆ ಗೌರವ, ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದ್ದರೆ, ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ರೇಷ್ಮಾ ಉದಯ್ ಶೆಟ್ಟಿ, ಜೀತೆಂದ್ರ ಶೆಟ್ಟಿ ಉದ್ಯಾವರ, ನಯನಾ ಗಣೇಶ್, ದಿನೇಶ್ ಆಮೀನ್, ಶ್ರೀನಿಧಿ ಹೆಗ್ಡೆ, ಶ್ರೀಶಾ ನಾಯಕ್ ಪೆರ್ಣಂಕಿಲ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಶಿವಕುಮಾರ್ ಅಂಬಲಪಾಡಿ ವಿಜಯ್ ಕೊಡವೂರು ಇದ್ದರು.

Cut-off box - ಕಾಂಗ್ರೆಸ್‌ ರಾಜೀನಾಮೆ ಪಡೆಯಲಿ: ಯಶ್‌ಪಾಲ್ ಉಡುಪಿ: ಕಾಂಗ್ರೆಸ್ ಪಕ್ಷಕ್ಕೆ ದೇಶದ ಸಂವಿಧಾನ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕಿಂಚಿತ್ ಗೌರವ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇದ್ದರೆ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ಸಿದ್ಧರಾಮಯ್ಯ ವಿರುದ್ಧ ತನಿಖೆಗೆ ಹಸಿರು ನಿಶಾನೆ ತೋರಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿದ್ಧರಾಮಯ್ಯ ಅವರು ಇಂತಹ ಪರಿಸ್ಥಿತಿಯಲ್ಲಿಯೂ ಅಧಿಕಾರದ ಆಸೆಯಿಂದ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡಲು ಮುಂದಾದರೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಹಿಂದೆ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ದೊಡ್ಡ ಪ್ರತಿಭಟನೆ ಮಾಡಿದ್ದರು. ಹೈಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಹೇಳಿದ್ದಾರೆ.

ನೆಲದ ಕಾನೂನು ಎಲ್ಲರಿಗೂ ಒಂದೇ’ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಕಾರಣಕ್ಕೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಇತರರ ವಿಚಾರದಲ್ಲಿ ರಾಜೀನಾಮೆ ಕೇಳಲು ಆಸಕ್ತಿ ವಹಿಸುತ್ತಿದ್ದ ಸಿದ್ದರಾಮಯ್ಯ ಅವರು ತಮ್ಮ ಸರದಿ ಬಂದಾಗ ರಾಜಿನಾಮೆ ನೀಡದೆ ಕಾಲಹರಣ ಮಾಡುತ್ತಿರುವುದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವಾಗಿದೆ. ಅಧಿಕಾರದ ದಾಹದಿಂದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡಿ ರಾಜ್ಯವನ್ನು ದಿವಾಳಿಯ ಅಂಚಿಗೆ ನೂಕಿರುವ ಸಿದ್ದರಾಮಯ್ಯ ಅವರು ಈ ನೆಲದ ಕಾನೂನನ್ನು ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT