ಶನಿವಾರ, ಮೇ 21, 2022
26 °C
ದಶಕಗಳ ಹಿಂದೆ ಖರೀದಿಸಿದ ನಿವೇಶನಗಳಿಗೆ ಕಾನೂನು ತೊಡಕು: ಸಂತ್ರಸ್ತರಿಂದ ಧರಣಿ

‘ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದಶಕಗಳ ಹಿಂದೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ ನಿವೇಶನಗಳನ್ನು ಖರೀದಿಸಿದವರು ವಂಚನೆಗೆ ಸಿಲುಕಿ ಕಾನೂನು ತೊಡಕು ಎದುರಿಸುವಂತಾಗಿದ್ದು, ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ನಡೆಸಿದ ಸಂತ್ರಸ್ತರು ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಅವರಿಗೆ ಮನವಿ ಸಲ್ಲಿಸಿದರು.

1990 ಹಾಗೂ 2000ದಲ್ಲಿ ಹಲವರು ಕೃಷಿ ಭೂಮಿಯನ್ನು ಭೂಪರಿವರ್ತನೆಯ ಮೂಲಕ ವಸತಿ ಬಡಾವಣೆಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಿದ್ದರು. ಅವರಿಂದ ನೂರಾರು ಮಂದಿ ನಿವೇಶನ ಖರೀದಿ ಮಾಡಿದ್ದರು. ಬಡಾವಣೆಗಳ ನಿರ್ಮಾನ ಮಾಡುವಾಗ ಸಮುದಾಯದ ಉಪಯೋಗಕ್ಕೆ ಜಾಗ ಮೀಸಲಿಡದೆ ಮಾರಾಟ ಮಾಡಲಾಗಿತ್ತು. ನಿವೇಶನ ಖರೀದಿಯ ಬಳಿಕ ನೋಂದಣಿಯೂ ಆಗಿದ್ದರಿಂದ ಬಡಾವಣೆ ನಿಯಮಬದ್ಧವಾಗಿದೆ ಎಮದು ನಿವೇಶನದಾರರು ನಿಶ್ಚಿಂತೆಯಾಗಿದ್ದರು.

ಆದರೆ, ಈಗ ಕಂದಾಯ ಇಲಾಖೆ ನಿಯಮಗಳ ಉಲ್ಲಂಘನೆಯ ಆರೋಪವೊಡ್ಡಿ ಮನೆ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ನಿವೇಶನ ಮಾಲೀಕರು ಅಕ್ರಮ ಎಸಗಿದ್ದು, ದಂಡ ಕಟ್ಟುವಂತೆ ಹಾಗೂ ನಿಯಮಾನುಸಾರ ಸಮುದಾಯಕ್ಕೆ ಮೀಸಲಾದ ಜಾಗವನ್ನು ಬಿಟ್ಟುಕೊಟ್ಟು ಸಕ್ರಮ ಮಾಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಯಲ್ಲಿ ಭೂಮಿ ನೋಂದಣಿಯಾಗಿ ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳುವಾಗ ನಿಯಮ ಉಲ್ಲಂಘನೆ ಅರಿವಿಗೆ ಬಾರದಿರುವುದು ದುರಂತ. ಕಂದಾಯ ಇಲಾಖೆಯ ಗಂಭೀರ ತಪ್ಪನ್ನು ಪ್ರಶ್ನಿಸುವ ಧೈರ್ಯವನ್ನು ನಗರಾಭಿವೃದ್ಧಿ ಪ್ರಾಧಿಕಾರ ತೋರುತ್ತಿಲ್ಲ. ಬದಲಾಗಿ ನಿವೇಶನದಾರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.

ನಿವೇಶನ ಖರೀದಿದಾರರು ಸಂತ್ರಸ್ತರೇ ವಿನಾ ಅಕ್ರಮ ಎಸಗಿಲ್ಲ. ಆದರೂ ಅಕ್ರಮ ಸಕ್ರಮದಡಿ ಹಲವರು ಅರ್ಜಿ ಸಲ್ಲಿಸಿದ್ದಾರೆ. 15 ವರ್ಷಗಳಿಂದಲೂ ನ್ಯಾಯಯುತ ಬೇಡಿಕೆಗೆ ಸ್ಪಂದನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

15ರಿಂದ 20 ವರ್ಷ ಕಾನೂನು ತೊಡಕುಗಳನ್ನು ಬಗೆಹರಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಂತ್ರಸ್ತರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.