ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬಿರುಸಿನ ಮಳೆ; 5 ದಿನ ಅಲರ್ಟ್‌

Last Updated 12 ಅಕ್ಟೋಬರ್ 2021, 14:19 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮಂಗಳವಾರ ಬಿರುಸಾಗಿ ಸುರಿಯಿತು. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿಯಯವರೆಗೂ ನಿರಂತರವಾಗಿ ಸುರಿದು ಜನಜೀವನ ಅಸ್ತವ್ಯಸ್ತವಾಯಿತು.

ಸೋಮವಾರ ತಡರಾತ್ರಿ ಹಾಗೂ ಬೆಳಗಿನ ಜಾವ ಮಳೆಯ ಅಬ್ಬರ ಜೋರಾಗಿತ್ತು. ಮಂಗಳವಾರ ಬೆಳಿಗ್ಗೆ ಕೆಲಹೊತ್ತು ಸುರಿದ ಮಳೆ ಬಳಿಕ ಮರೆಯಾಗಿ, ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿಸಿಲು ಕರಗಿ ದಟ್ಟವಾದ ಕಪ್ಪು ಮೋಡ ಆವರಿಸಿ, ಮಳೆ ಸುರಿಯಲು ಆರಂಭಿಸಿತು.

ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡು, ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಹಲವು ತಾಸು ಎಡೆಬಿಡದೆ ಸುರಿದ ಮಳೆಯಿಂದಾಗಿ ರಸ್ತೆಗಳು ಮುಳುಗಿದ್ದವು. ಮೂಡನಿಡಂಬೂರು, ಬನ್ನಂಜೆ, ಬೈಲೂರು, ಮಠದ ಬೆಟ್ಟು ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿ ನಾಗರಿಕರು ಪರಿತಪಿಸುವಂತಾಯಿತು.

ಪರ್ಕಳ, ಆದಿ ಉಡುಪಿ ಹಾಗೂ ಮಲ್ಪೆ ಮುಖ್ಯ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಓಡಿಸಲು ಸವಾರರು ಹರಸಾಹಸ ಪಡಬೇಕಾಯಿತು.

ಮಳೆ ಮುನ್ಸೂಚನೆ:

ಅ.17ರವರೆಗೆ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 6.4 ಸೆಂ.ಮೀ.ಗಿಂತ ಹೆಚ್ಚು ಮಳೆ ಸುರಿಯಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದೆ. ಸೋಮವಾರ ಸುರಿದ ಮಳೆಗೆ ಕಾರ್ಕಳ ತಾಲ್ಲೂಕಿನ ಕಸಬಾ ಗ್ರಾಮದ ಉದಯ್ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ 2.1, ಬ್ರಹ್ಮಾವರದಲ್ಲಿ 2.7, ಕಾಪುವಿನಲ್ಲಿ 3.8, ಕುಂದಾಪುರದಲ್ಲಿ 2.8, ಬೈಂದೂರಿನಲ್ಲಿ 2.7, ಕಾರ್ಕಳದಲ್ಲಿ 1.3 ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ 1.8 ಸೆಂ.ಮೀ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT