ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ವಾಹನ ಸವಾರರೇ ಹೊಂಡಗಳಿವೆ ಎಚ್ಚರ...

ಅಪಾಯ ಆಹ್ವಾನಿಸುತ್ತಿದೆ ಹೆದ್ದಾರಿ, ಮುಖ್ಯರಸ್ತೆಗಳ ಗುಂಡಿಗಳು: ಮಳೆ ಬಂದರೆ ಇನ್ನಷ್ಟು ಗೋಳು
Published 5 ಆಗಸ್ಟ್ 2024, 6:03 IST
Last Updated 5 ಆಗಸ್ಟ್ 2024, 6:03 IST
ಅಕ್ಷರ ಗಾತ್ರ

ಉಡುಪಿ: ಎಲ್ಲೆಂದರಲ್ಲಿ ಬೃಹತ್‌ ಹೊಂಡಗಳು, ಕಿತ್ತು ಹೋಗಿರುವ ಡಾಂಬರ್‌, ಚದುರಿರುವ ಜಲ್ಲಿ ಕಲ್ಲುಗಳು, ಮಳೆ ಬಂದರೆ ಈಜುಕೊಳ ನೆನಪಿಸುವ ದೃಶ್ಯ...ಇದು ಜಿಲ್ಲೆಯ ಬಹುತೇಕ ರಸ್ತೆಗಳ ದುಃಸ್ಥಿತಿ.

ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ರಸ್ತೆಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ, ಈಗ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಸ್ತೆಗಳ ಹೊಂಡ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ.

ನಗರ ಸೇರಿದಂತೆ ಹಲವೆಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಧಾರಾಕಾರವಾಗಿ ಮಳೆ ಸುರಿದಾಗ ನೀರು ಹರಿದು ಹೋಗಲು ಜಾಗವಿಲ್ಲದೆ, ರಸ್ತೆಯಲ್ಲೇ ಸಂಗ್ರಹಗೊಳ್ಳುತ್ತಿದೆ. ರಸ್ತೆ ಇನ್ನಷ್ಟು ಹದಗೆಡಲು ಇದೂ ಕಾರಣವಾಗಿದೆ.

ಕಳಪೆ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ರಸ್ತೆಗಳು ಹದಗೆಡುತ್ತಿವೆ ಎಂಬುದು ಸಾರ್ವಜನಿಕರ ಆರೋಪ.

ಉಡುಪಿ ನಗರದ ಬ್ರಹ್ಮಗಿರಿ ಬಳಿಯ ರಸ್ತೆ ಹದಗೆಟ್ಟಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಕಾರಣ ಈಚೆಗೆ ದುರಸ್ತಿ ಕಾರ್ಯ ನಡೆದಿತ್ತು. ಉಡುಪಿಯ ಕರಾವಳಿ ಬೈಪಾಸ್‌ ಬಳಿಯ ಸರ್ವೀಸ್‌ ರಸ್ತೆಯೊಂದರಲ್ಲಿ ಒಂದು ಮಳೆ ಬಂದರೆ ಸಾಕು ಈಜುಕೊಳದಂತೆ ನೀರು ಸಂಗ್ರಹವಾಗುತ್ತದೆ. ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕರಾವಳಿ ಬೈಪಾಸ್‌ನಿಂದ ಮಲ್ಪೆಗೆ ಹೋಗುವ ಹೆದ್ದಾರಿಯ ಸ್ಥಿತಿ ಶೋಚನೀಯವಾಗಿದೆ. ಈ ರಸ್ತೆ ಆದಿ ಉಡುಪಿಯ ಬಳಿ ಸಂಪೂರ್ಣ ಹದಗೆಟ್ಟಿದೆ. ಡಾಂಬರ್‌ ಕಿತ್ತು ಹೋಗಿ ಬೃಹತ್‌ ಹೊಂಡಗಳು ನಿರ್ಮಾಣವಾಗಿವೆ. ರಸ್ತೆ ಬದಿಯಲ್ಲಿ ಹಾಕಿರುವ ಕೆಂಪು ಮಣ್ಣಿನಿಂದಾಗಿ ರಾಡಿ ಎದ್ದಿದೆ.

ಮಲ್ಪೆಯ ಮೀನುಗಾರಿಕಾ ಬಂದರಿಗೆ ಮತ್ತು ಮಲ್ಪೆ ಬೀಚ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹದಗೆಟ್ಟಿರುವುದರಿಂದ ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.

ಆಮೆ ವೇಗದಲ್ಲಿ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ ಕಲ್ಯಾಣಪುರ ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಆಮೆ ವೇಗದಿಂದ ನಡೆಯುತ್ತಿರುವ ಕಾರಣ ಜನರು ಬೇಸತ್ತಿದ್ದಾರೆ. ಇಲ್ಲಿನ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಇಲ್ಲಿ ಆಗಾಗ ವಾಹನ ದಟ್ಟಣೆ ಉಂಟಾಗುವುದರಿಂದ ರಸ್ತೆಯಲ್ಲಿ ಸಂಚರಿಸುವವರ ಗೋಳು ಹೇಳ ತೀರದು.

ಅಪೂರ್ಣ ಕಾಮಗಾರಿಯಿಂದ ತೊಂದರೆ

ಹಿರಿಯಡ‌್ಕ: ಪೆರ್ಡೂರು ಭಾಗದಲ್ಲಿ ಮಲ್ಪೆ–ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದ್ದು, ಪರ್ಕಳದಿಂದ ಹೆಬ್ರಿವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಅಪೂರ್ಣವಾದ ಕಾಮಗಾರಿಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಓಂತಿಬೆಟ್ಟು, ಹಿರಿಯಡ್ಕ ಪೇಟೆ, ಪೆರ್ಡೂರು ಪೇಟೆಯ ಭಾಗದಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದು, ರಸ್ತೆ ತೀರಾ ಹದಗೆಟ್ಟಿದೆ. ಕಾಮಗಾರಿಯ ವೇಗ ಹೆಚ್ಚಿಸಿ ಜನರು ಅನುಭವಿಸುವ ತೊಂದರೆಗೆ ಮುಕ್ತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮದಿಂದ ಕೋಟ ಮಣೂರು ತನಕ‌ ಹೊಂಡಮಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವುದೇ ಸಾಧನೆಯಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಹೊಂಡ ಗೋಚರಿಸದ ಕಾರಣ ಹೊಂಡಕ್ಕೆ ಬಿದ್ದು, ಅನೇಕ ದ್ವಿಚಕ್ರ ವಾಹನ ಸವಾರರು ಆಸ್ಪತ್ರೆಗೆ ದಾಖಲಾದರೂ, ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾರ್ಯ ನಡೆದಿಲ್ಲ.

ಬ್ರಹ್ಮಾವರ ಬಾರ್ಕೂರು ಜನ್ನಾಡಿಗೆ ಸಾಗುವ ರಾಜ್ಯ ಹೆದ್ದಾರಿಯೂ ಹೊಂಡಮಯವಾಗಿದೆ. ಹಂದಾಡಿ,‌ ಬಾರ್ಕೂರು ಪೇಟೆಯ ಕೆಲವೆಡೆ ರಸ್ತೆಗಳಲ್ಲಿ ಡಾಂಬರ್‌ ಕಿತ್ತು ಹೋಗಿದೆ. ಸ್ಥಳೀಯ ವಾಹನ ಚಾಲಕರು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದರೂ ಭಾರೀ ಮಳೆ ಮತ್ತು ನಿರಂತರ ಸಾಗುವ ಘ‌ನ ವಾಹನಗಳ ಕಾರಣ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತಿದೆ. ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ

ಶಿರ್ವ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸದ್ಯ ನನೆಗುದಿಗೆ ಬಿದ್ದಿದೆ. ಕಟಪಾಡಿಯಲ್ಲಿ ಅಂಡರ್ ಪಾಸ್ ಹಾಗೂ ಮೇಲ್ಸೇತುವೆ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಈಡೇರಲೇ ಇಲ್ಲ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಕಟಪಾಡಿ ಪೇಟೆ ಸಮೀಪ ಹಾದು ಹೋಗುವ ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಿಸದೆ ಅವೈಜ್ಞಾನಿಕವಾಗಿ ಜಂಕ್ಷನ್ ನಿರ್ಮಿಸಿದ್ದರಿಂದ ದಿನನಿತ್ಯ ವಾಹನ ದಟ್ಟಣೆಯಿಂದ ಹೆದ್ದಾರಿ ದಾಟುವುದೇ ಸಮಸ್ಯೆಯಾಗಿದೆ.

ನಗರದ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಡಾಂಬರು ಹಾಕಿದ್ದ ಹಲವು ರಸ್ತೆಗಳು ಒಂದೇ ಮಳೆಗೆ ಕಿತ್ತು ಹೋಗಿವೆ. ಕಳಪೆ ಕಾಮಗಾರಿಯೇ ರಸ್ತೆಗಳ ದುಸ್ಥಿತಿಗೆ ಕಾರಣ. ಅಧಿಕಾರಿಗಳು ರಸ್ತೆ ಕಾಮಗಾರಿ ನಡೆಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

-ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ

ಕಟಪಾಡಿ ಜಂಕ್ಷನ್ ಅವ್ಯವಸ್ಥೆ ಜನರಿಗಾಗುವ ಸಮಸ್ಯೆ ಬಗ್ಗೆ ಸಂಸದರು ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಅವರೆಲ್ಲರ ನಡೆ ಜನರ ತಾಳ್ಮೆ ಪರೀಕ್ಷಿಸುವಂತಿದೆ

-ಚಂದ್ರ ಪೂಜಾರಿ ಸರಕಾರಿಗುಡ್ಡೆ ಕಾಪು ವಲಯ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ

ಕಟಪಾಡಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಮಳೆಗಾಲ ಮುಗಿದ ತಕ್ಷಣ ಹೋರಾಟ ನಡೆಸಲಾಗುವುದು

-ಡಾ.ಯು.ಕೆ.ಶೆಟ್ಟಿ ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮುಖ್ಯಸ್ಥ

‘ಮಳೆ ನಿಂತ ಕೂಡಲೇ ಕಾಮಗಾರಿ ಚುರುಕು’

ಕಲ್ಯಾಣಪುರ ಸಂತೆಕಟ್ಟೆ ಅಂಡರ್‌ಪಾಸ್‌ ಕಾಮಗಾರಿಯನ್ನು ಚುರುಕುಗೊಳಿಸಲು ಜಡಿ ಮಳೆ ಅಡ್ಡಿಯಾಗಿದೆ. ನಾನು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಯನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಮಳೆ ಕಡಿಮೆಯಾದ ಕೂಡಲೇ ಸಮರೋಪಾದಿಯಲ್ಲಿ ಕಾಮಗಾರಿ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈಚೆಗೆ ಇದೇ ವಿಚಾರವಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿರುವುದಾಗಿಯೂ ಅವರು ಹೇಳಿದರು. ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡ ಮಳೆಯಿಂದಾಗಿ ನಿಧಾನಗತಿಯಾಗಿದೆ. ಮಳೆ ಕಡಿಮೆಯಾಗುತ್ತಲೇ ಅದರ ಕಾಮಗಾರಿಯೂ ಚುರುಕುಗೊಳ್ಳಲಿದೆ ಎಂದರು.

‘ಸರ್ಕಾರಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಕೆ’

ಜಿಲ್ಲೆಯಾದ್ಯಂತ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ. ಈ ಕುರಿತು ಸರ್ಕಾರಕ್ಕೆ  ಶೀಘ್ರ ಪ್ರಸ್ತಾವ ಸಲ್ಲಿಸಲಾಗುವುದು. ಅತಿಯಾದ ಮಳೆಯಿಂದಾಗಿಯೂ ಕೆಲವೆಡೆ ರಸ್ತೆಗಳು ಹದಗೆಟ್ಟಿವೆ. ರಸ್ತೆ ಹಾನಿ ಸೇರಿದಂತೆ ಮಳೆಯಿಂದಾಗಿ ಜಿಲ್ಲೆಯಲ್ಲಿ ₹167 ಕೋಟಿ ನಷ್ಟವಾಗಿದೆ. ರಸ್ತೆಗಳು ತೀರಾ ಹದಗೆಟ್ಟಿರುವಲ್ಲಿ ವೆಟ್‌ಮಿಕ್ಸ್‌ ಹಾಕಲು ಸೂಚಿಸಿದ್ದೇವೆ. ವೆಟ್‌ಮಿಕ್ಸ್‌ ಹಾಕಿದರೂ ಮಳೆಗೆ ನಿಲ್ಲುತ್ತಿಲ್ಲ. ರಸ್ತೆಗಳನ್ನು ಅಲ್ಲಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಲು ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

‘ಹೊಂಡಮಯ ಹೆದ್ದಾರಿ’

ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಿಂದ ಕಾಪುವರೆಗಿನ ಚತುಷ್ಪಥ ರಸ್ತೆಯುದ್ದಕ್ಕೂ ಅಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು ವಾಹನ ಸವಾರರು ಸರ್ಕಸ್ ಮಾಡುತ್ತಲೇ ಸಂಚರಿಸುವಂತಾಗಿದೆ. ಹೆದ್ದಾರಿಯಲ್ಲಿ ಸಂಗ್ರಹವಾಗುವ ಮಳೆ ನೀರು ಸಮರ್ಪಕವಾಗಿ ಹರಿದು ಹೋಗದೇ ಡಾಂಬರು ಸವೆತವುಂಟಾಗಿ ಹೊಂಡಗಳು ನಿರ್ಮಾಣವಾಗುತ್ತಿವೆ. ಸರ್ವೀಸ್ ರಸ್ತೆಗಳು ಜೋಡಣೆಯಾಗುವಲ್ಲಿ ಚರಂಡಿ ನಿರ್ಮಾಣವಾಗದೇ ಇರುವುದೂ ರಸ್ತೆ ಮಧ್ಯೆ ಹೊಂಡ ಮತ್ತು ನೆರೆ ಸಮಸ್ಯೆಗೆ ಕಾರಣವಾಗುತ್ತಿದೆ. ಕಾಪು ಮೂಳೂರು ಉಳಿಯರಗೋಳಿ ಕೋತಲ್‌ಕಟ್ಟೆ ಉಚ್ಚಿಲ ಎರ್ಮಾಳು ತೆಂಕ ಎರ್ಮಾಳು ಬಡಾ ಪಡುಬಿದ್ರಿ ಹೆಜಮಾಡಿ ಮೊದಲಾದೆಡೆಗಳಲ್ಲೂ ರಸ್ತೆಗಳು ಹದಗೆಟ್ಟಿವೆ.

ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಆಗರ

ಕಾರ್ಕಳ ತಾಲ್ಲೂಕಿನ ಸಾಣೂರು ಬಿಕರ್ನಕಟ್ಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಅಪೂರ್ಣಗೊಂಡಿದ್ದು ಸಮಸ್ಯೆಗಳ ಆಗರವಾಗಿದೆ. ಪುಲ್ಕೇರಿ ಜಂಕ್ಷನ್‌ನಿಂದ ಮುರತಂಗಡಿ ತನಕ ಹೆದ್ದಾರಿಯ ಎರಡು ಕಡೆಗಳಲ್ಲಿ 12 ಅಡ್ಡರಸ್ತೆಗಳಿದ್ದು ಅಡ್ಡರಸ್ತೆಗಳಿಗೆ ಹಾನಿಯಾಗಿದೆ. ಕೆಲವು ಕಡೆ 50 ಮೀ.ನಿಂದ 100 ಮೀ. ತನಕ ಮಣ್ಣಿನ ರಸ್ತೆಗೆ ಜಲ್ಲಿ ಹಾಕಿದ್ದು ಇದಕ್ಕೆ ಡಾಂಬರೀಕರಣ ಮಾಡಬೇಕಾಗಿದೆ. ಸಾಣೂರು ಯುವಕ ಮಂಡಲದ ಮೈದಾನದ ಬಳಿಯ ಪ್ರದೇಶದಲ್ಲಿ ಗುಡ್ಡಜರಿತ ಸಂಭವಿಸಿರುವ ಜಾಗದಲ್ಲಿ ಮತ್ತು ಗುಡ್ಡ ಜರಿಯುವ ಅಪಾಯವಿರುವ ಸಾಣೂರು ಪದವಿಪೂರ್ವ ಕಾಲೇಜಿನ ಮುಂಭಾಗದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಗುಡ್ಡ ಜರಿದಿರುವ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ.

ಹದಗೆಟ್ಟಿದೆ ರಾಜ್ಯ ಹೆದ್ದಾರಿ

ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ಮುದ್ರಾಡಿಯಲ್ಲಿ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಹೊಂಡಗಳಿಂದ ಕೂಡಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ತಾತ್ಕಾಲಿಕವಾಗಿ ಕಲ್ಲಿನ ಪುಡಿಯನ್ನು ಹೊಂಡಗಳಿಗೆ ಹಾಕಿದ್ದರೂ ಭಾರಿ ಮಳೆಯಿಂದ ಅವು ನೀರಿನಲ್ಲಿ ಕೊಚ್ಚಿ ಹೋಗಿದೆ.  ವಾರಾಹಿ ನೀರು ಸರಬರಾಜು ಯೋಜನೆಯ ಕಾಮಗಾರಿ ನಡೆಸಲು ಪೈಪ್‌ ಅಳವಡಿಸಲು ಆಳವಾದ ಕಣಿವೆ ತೋಡಿದ್ದು ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಬದಿಯ ಕಾಲುವೆಗಳು ಮುಚ್ಚಿ ಹೋಗಿವೆ. ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ಬಹುತೇಕ ರಸ್ತೆಗಳು ಹಾಳಾಗಲು ಕಾರಣವಾಗಿದೆ.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ವಾಸುದೇವ್‌ ಭಟ್‌, ಶೇಷಗಿರಿ ಭಟ್‌, ಸುಕುಮಾರ್‌ ಮುನಿಯಾಲ್‌, ರಾಘವೇಂದ್ರ ಹಿರಿಯಡಕ, ಪ್ರಕಾಶ್‌ ಸುವರ್ಣ ಕಟಪಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT