ಗುರುವಾರ , ಸೆಪ್ಟೆಂಬರ್ 16, 2021
29 °C
’ಬರ ನಿರ್ವಹಣೆಗೆ ಹಣಕಾಸು ಸಮಸ್ಯೆ ಇಲ್ಲ’

ಮೀನುಗಾರರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ: ಸಚಿವೆ ಡಾ.ಜಯಮಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯ 84 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 126 ಗ್ರಾಮಗಳಿಗೆ 141 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಬಾವಿ, ಬೋರ್‌ವೆಲ್‌ಗಳನ್ನು ಬಳಸಿಕೊಂಡು ನೀರು ಕೊಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದರು.

ಶುಕ್ರವಾರ ನಗರದ ಓಷನ್ ಪರ್ಲ್‌ ಹೋಟೆಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬಜೆ ಅಣೆಕಟ್ಟೆಯ ಹೂಳೆತ್ತಲು ನಿರ್ಧರಿಸಲಾಗಿದ್ದು, ಜಲಾಶಯಕ್ಕೆ ನೀರು ಹರಿದುಬರಲು ಅಡ್ಡಿಯಾಗಿರುವ ಕಲ್ಲುಬಂಡೆಗಳನ್ನು ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದೆ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬರ ನಿರ್ವಹಣೆಗೆ ಹಣಕಾಸು ತೊಂದರೆ ಇಲ್ಲ, ಸರ್ಕಾರದಿಂದ ಅಗತ್ಯ ಅನುದಾನ ಬಂದಿದೆ ಎಂದು ಸಚಿವರು ತಿಳಿಸಿದರು.

ಬರ ನಿರ್ವಹಣೆಗೆ ₹ 33 ಕೋಟಿ ಹಣ ಲಭ್ಯವಿದೆ. ಜಿಲ್ಲಾಡಳಿತದ ಮತ್ತೊಂದು ಖಾತೆಯಲ್ಲಿ ₹ 6 ಕೋಟಿ ಲಭ್ಯವಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹೂಳೆತ್ತುವ ಕೆಲಸವನ್ನು ನರೇಗಾ ಮೂಲಕ ನಡೆಸಲು ಚರ್ಚಿಸಲಾಗಿದೆ. ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಡೆಯಲು ಭೂಮಿಗೆ ನೀರು ಇಂಗಿಸಲು ಮಳೆನೀರು ಸಂಗ್ರಹ ಪದ್ಧತಿ ಅಳವಡಿಕೆಗೆ ಉತ್ತೇಜನ ನೀಡಲಾಗುವುದು. ಜಿಲ್ಲೆಯಲ್ಲಿರುವ 400 ಮದಗಗಳನ್ನು ಹೂಳೆತ್ತಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ನಗರದಲ್ಲಿ 15 ದಿನಗಳಿಗೆ ಸಾಲುವಷ್ಟು ಕುಡಿಯುವ ನೀರು ಲಭ್ಯವಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ನದಿಗಳಿಗೆ ಅನಧಿಕೃತವಾಗಿ ಹಾಕಲಾಗಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೀನುಗಾರರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ

ಸುವರ್ಣ ತ್ರಿಭುಜ ಬೋಟ್‌ ದುರಂತದ ಹಿನ್ನೆಲೆಯಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಲಾಗುವುದು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ₹ 6 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹ 4 ಲಕ್ಷವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಹಾಕಲು ಸರ್ಕಾರ ತೀರ್ಮಾನಿಸಿದೆ. ವಾರಸುದಾರರಿಂದ ಇಂಡೆಮ್ನಿಟಿ ಬಾಂಡ್‌ ಹಾಗೂ ಅಗತ್ಯ ದಾಖಲಾತಿಗಳನ್ನು ಪಡೆದು ಮೀನುಗಾರಿಕಾ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು