ಶನಿವಾರ, ಜುಲೈ 31, 2021
28 °C

‘ಜಿಲ್ಲಾ ಮಟ್ಟದ ದೂರು ಸಮಿತಿಯಿಂದ ಕೈಬಿಟ್ಟಿದ್ದಕ್ಕೆ ಕಾರಣ ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಯಿಂದ ಏಕಾಏಕಿ ನನ್ನ ಹೆಸರನ್ನು ಕೈಬಿಡಲು ಕಾರಣ ಏನು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು’ ಎಂದು ವಕೀಲೆ ಸಹನಾ ಕುಂದರ್ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಯಿಂದ ಹೆಸರನ್ನು ಕೈಬಿಟ್ಟಿದ್ದಾರೆ. ಇಲ್ಲವಾದರೆ, ಹೆಸರು ಕೈಬಿಟ್ಟಿದ್ದಕ್ಕೆ ಸೂಕ್ತ ಕಾರಣ ಕೊಡಬೇಕು ಎಂದು ಒತ್ತಾಯಿಸಿದರು.

‘ಮಹಿಳೆಯರು ಕರ್ತವ್ಯ ನಿರ್ವಹಿಸುವ ಕಡೆಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದ ದೂರು ಆಲಿಸುವ ಹಾಗೂ ಪರಿಹಾರ ಸೂಚಿಸುವ ಕಾರ್ಯ ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗೆ ಸೇರಿದೆ. ಈ ಸಮಿತಿಗೆ ಜುಲೈ 8ರಂದು ನನನ್ನು ಸದಸ್ಯೆಯನ್ನಾಗಿ ನೇಮಕ ಮಾಡಿ, ಅದೇ ದಿನ ನೇಮಕಾತಿ ಆದೇಶವನ್ನು ತಡೆಹಿಡಿಯಲಾಗಿದೆ’ ಎಂದು ಸಹನಾ ಕುಂದರ್ ದೂರಿದರು.

‘ಹೆಸರು ಕೈಬಿಟ್ಟಿದ್ದಕ್ಕೆ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಪ್ರಶ್ನಿಸಿದಾಗ ಸಮಂಜಸ ಉತ್ತರ ಸಿಗಲಿಲ್ಲ. ಸಮಿತಿಗೆ ನೇಮಕ ಮಾಡುವಂತೆ ಅರ್ಜಿ ಹಾಕಿಲ್ಲ, ಶಿಫಾರಸು ಕೂಡ ಮಾಡಿಲ್ಲ. ಹೀಗಿರುವಾಗ ಜಿಲ್ಲಾಡಳಿತವೇ ನೇಮಕ ಮಾಡಿ ಬಳಿಕ ಹೆಸರು ಕೈಬಿಟ್ಟಿರುವುದು ನೋವು ತಂದಿದೆ. ಈ ಸಂಬಂಧ ಮಹಿಳಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು