ಬುಧವಾರ, ಫೆಬ್ರವರಿ 19, 2020
24 °C

ಕರಾವಳಿಗೆ ಸಮಗ್ರ ಮೀನುಗಾರಿಕಾ ನೀತಿ: ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯ ಮೀನುಗಾರಿಕೆಗೆ ಪೂರಕವಾಗಿ ಸಮಗ್ರ ಮೀನುಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ಬಜೆಟ್‌ನಲ್ಲಿ ಪ್ರಕಟಿಸಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಶ್ಯಾಮಿಲಿ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ತಾಲ್ಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ 10ನೇ ವಾರ್ಷಿಕೋತ್ಸವ, ಮೀನುಗಾರರ ಸಮಾವೇಶ ಹಾಗೂ ಸನ್ಮಾನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೆರೆ ರಾಜ್ಯಗಳ ಮೀನುಗಾರಿಕಾ ನೀತಿ ಅಧ್ಯಯನ ಮಾಡಲಾಗಿದ್ದು, ಕರಾವಳಿಗೆ ಹೊಂದುವಂತಹ ಸಮಗ್ರ  ಮೀನುಗಾರಿಕಾ ನೀತಿಯನ್ನು ಸಿದ್ಧಪಡಿಸಿದ್ದು, ಶೀಘ್ರವೇ ಜಾರಿಗೆ ಬರಲಿದೆ ಎಂದರು.

ಕೆಎಫ್‌ಡಿಸಿಯಿಂದ ದಕ್ಷಿಣ ಕನ್ನಡ, ಉಡುಪಿಯಲ್ಲಿ ತಳ್ಳು ಮೀನು ಮಾರಾಟ ಅಂಗಡಿಗಳನ್ನು ತೆರೆಯುವುದಿಲ್ಲ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್‌ ಕಾರ್ಡ್‌, ಮೂರು ಲಕ್ಷದವರೆಗೂ ಸಾಲ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಮೀನುಗಾರರ ಸಾಲ ಮನ್ನಾ ಮಾಡಿದೆ. ಆದರೆ, ಬ್ಯಾಂಕ್‌ನಿಂದ ಮೀನುಗಾರರಿಗೆ ತೊಂದರೆಗಳಾಗುತ್ತಿರುವ ದೂರುಗಳು ಬಂದಿದ್ದು, ಸಾಲ ವಸೂಲಿಗೆ ಒತ್ತಾಯ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಮೀನುಗಾರ ಮುಖಂಡ ಹಾಗೂ ಉದ್ಯಮಿ ಜಿ.ಶಂಕರ್ ಮಾತನಾಡಿ, ಕರಾವಳಿಯ ಮತ್ಸ್ಯೋದಮ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ತುಂಬಲಾರದ ನಷ್ಟ ಸಂಭವಿಸಿದೆ. ರಾಜ್ಯ ಸರ್ಕಾರ ಕೂಡಲೇ ಮಹಿಳಾ ಮೀನುಗಾರರ ಸಾಲ ಮನ್ನಾ ಹಣವನ್ನು ಅವರ ಖಾತೆಗೆ ಸಾಲದ ಹಣ ಜಮೆ ಮಾಡಬೇಕು ಎಂದು  ಒತ್ತಾಯಿಸಿದರು.

ಮಲ್ಪೆ, ಗಂಗೊಳ್ಳಿ, ಕಾರವಾರ ಸೇರಿದಂತೆ ಸಮಗ್ರ ಕರಾವಳಿಯ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಜತೆಗೆ, ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಬೇಕು ಎಂದು ಜಿ.ಶಂಕರ್ ಒತ್ತಾಯಿಸಿದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಕರಾವಳಿಯ ಮತದಾರರು ಶಕ್ತಿ ತುಂಬಿದ್ದಾರೆ. ಇದಕ್ಕೆ ಪ್ರತಿಯಾಗಿ ಮೀನುಗಾರರ ಸಮಸ್ಯೆಗೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ಬರುವ ವಿಶ್ವಾಸವಿದೆ ಎಂದರು.

ಮಹಿಳಾ ಮೀನುಗಾರರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಆದರೆ, ಹಣ ಬಿಡುಗಡೆ ವಿಳಂಬವಾಗಿದ್ದು, ಶೀಘ್ರ ಸಾಲದ ಖಾತೆಗೆ ಹಣ ಜಮೆಯಾಗಲಿದೆ. ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣದಲ್ಲಿ ಕೇಂದ್ರದಿಂದ ಗರಿಷ್ಠ ಹಾಗೂ ವಿಶೇಷ ಪರಿಹಾರ ಕೊಡಿಸುವ ಪ್ರಯತ್ನಗಳು ನಡೆದಿದ್ದು, ಇದೇ ತಿಂಗಳ 10ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಮಾಡಲಾಗುವುದು. ಸುವರ್ಣ ತ್ರಿಭುಜ ಬೋಟ್‌ಗೆ ಐಎನ್‌ಎಸ್‌ ಕೊಚ್ಚಿನ್ ಹಡಗು ಡಿಕ್ಕಿಹೊಡೆದಿರುವ ಸಂಶಯದ ಕುರಿತು ತನಿಖೆ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮೀನುಗಾರ ಮಹಿಳೆಯರಿಗೆ ಸನ್ಮಾನಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್‌, ದಕ್ಷಿಣ ಕನ್ನಡ, ಉಡುಪಿ ಮೀನುಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಜಿ.ಸುವರ್ಣ, ಸಾಧು ಸಾಲ್ಯಾನ್, ಶಿವರಾಮ್‌, ರತ್ನ ಮೊಗವೀರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು