ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಬಕಾರಿ ಡಿಸ್ಟಿಲರಿಯಲ್ಲಿ ಸ್ಯಾನಿಟೈಸರ್‌

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಪೂರೈಕೆ
Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಉಡುಪಿ:ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದಂತೆ ಸ್ಯಾನಿಟೈಸರ್‌ಗಳ ಅಭಾವ ಎದುರಾಗಿತ್ತು. ಕಾಳಸಂತೆಯಲ್ಲಿ ಬೆಲೆ ದುಪ್ಪಟ್ಟಾಗಿತ್ತು. ಈಗ ಸ್ಯಾನಿಟೈಸರ್‌ಗಳ ಸಮಸ್ಯೆ ಮೊದಲಿನಂತಿಲ್ಲ. ಖುದ್ದು ಅಬಕಾರಿ ಇಲಾಖೆಯ ಡಿಸ್ಟಿಲರಿಯಲ್ಲಿ ಸ್ಯಾನಿಟೈಸರ್ ತಯಾರಿಕೆಯಾಗುತ್ತಿರುವುದು ಇದಕ್ಕೆ ಕಾರಣ.

15 ದಿನಗಳಿಂದ ಉಡುಪಿಯ ಸರ್ವದಾ ಡಿಸ್ಟಿಲರಿಯಲ್ಲಿ ಅಬಕಾರಿ ಇಲಾಖೆ ಸ್ಯಾನಿಟೈಸರ್ಸ್‌ ಉತ್ಪಾದನೆ ಮಾಡುತ್ತಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಮಾಡುತ್ತಿದೆ. ಮಾರುಕಟ್ಟೆಗೆ ಹೋಲಿಸಿದರೆ ಕಡಿಮೆ ದರ ಹಾಗೂ ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡಿರುವುದು ವಿಶೇಷ.

ಆರಂಭ ಹೇಗೆ:ರಾಜ್ಯದಲ್ಲಿ ಸ್ಯಾನಿಟೈಸರ್‌ಗಳ ಕೊರತೆ ಎದುರಾದಾಗ ಎಲ್ಲ ಡಿಸ್ಟಿಲರಿಗಳಲ್ಲಿ ಸ್ಯಾನಿಟೈಸರ್ ಉತ್ಪಾದಿಸುವಂತೆ ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಅದರಂತೆ, ರಾಜ್ಯದಲ್ಲೇ ಮೊದಲಾಗಿ ಉಡುಪಿಯ ಸರ್ವದಾ ಡಿಸ್ಟಿಲರಿಯಲ್ಲಿ ಸ್ಯಾನಿಟೈಸರ್‌ ತಯಾರಿಕೆ ಆರಂಭವಾಯಿತು.

ಮಾರ್ಚ್‌ 20 ಹಾಗೂ 22ರಂದು ಸರ್ಕಾರದಿಂದ ವಿಶೇಷ ಅನುಮತಿ ಪಡೆದ ಅಬಕಾರಿ ಇಲಾಖೆ ಆರಂಭದಲ್ಲಿ 300 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿ 293 ಲೀಟರ್ ಅನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ ಪೂರೈಕೆ ಮಾಡಿತು.

ಬಳಿಕ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದಲೂ ಸ್ಯಾನಿಟೈಸರ್‌ಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತೆ ಔಷಧ ನಿಯಂತ್ರಣ ಇಲಾಖೆಯಿಂದ ಪರವಾನಗಿ ಪಡೆದು ಉತ್ಪಾದನೆ ಮಾಡುತ್ತಿದೆ.

ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 1,800 ಲೀಟರ್ ಸ್ಯಾನಿಟೈಸರ್ ಪೂರೈಸಲಾಗಿತ್ತು. ಮತ್ತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬುಧವಾರ 900 ಲೀಟರ್‌ ಕಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದಕ್ಕೆ 2,700 ಲೀಟರ್ ಕೊಡಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಡಿ.ನಾಗೇಶ್‌ ಕುಮಾರ್‌ ಮಾಹಿತಿ ನೀಡಿದರು.

ದರ ಎಷ್ಟು:ಉಡುಪಿ ಜಿಲ್ಲೆಗೆ ಇದುವರೆಗೂ 1,643.76 ಲೀಟರ್‌ ಪೂರೈಸಲಾಗಿದೆ. 375 ಎಂ.ಎಲ್‌ ನ ಒಂದು ಬಾಟೆಲ್‌ಗೆ ₹ 187.50 ದರ ವಿಧಿಸಲು ಅವಕಾಶವಿದ್ದರೂ, ಜಿಲ್ಲಾಡಳಿತಕ್ಕೆ ಕೇವಲ ₹ 80ಕ್ಕೆ ಮಾರಾಟ ಮಾಡಿದ್ದೇವೆ ಎನ್ನುತ್ತಾರೆ ಅವರು.

ಆಲ್ಕೋಹಾಲ್ ಪ್ರಮಾಣ ಎಷ್ಟಿದೆ:ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಸ್ಯಾನಿಟೈಸರ್‌ನಲ್ಲಿ ಶೇ 70ಕ್ಕಿಂತ ಹೆಚ್ಚು ಆಲ್ಕೊಹಾಲ್‌ ಪ್ರಮಾಣ ಇದ್ದರೆ ಮಾತ್ರ ವೈರಸ್‌ಗಳು ನಾಶವಾಗುತ್ತವೆ. ಅದರಂತೆ, ಶೇ 80ರಷ್ಟು ಆಲ್ಕೊಹಾಲ್ ಪ್ರಮಾಣವನ್ನು ಬಳಕೆ ಮಾಡುತ್ತಿದ್ದು, ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

ಕಚ್ಛಾವಸ್ತು ಸಮಸ್ಯೆ:ಡಿಸ್ಟಿಲರಿಯಲ್ಲಿ ಸ್ಪಿರಿಟ್ ಸಮಸ್ಯೆ ಇಲ್ಲ. ಆದರೆ, ಇತರೆ ರಾಸಾಯನಿಕಗಳಾದ ಗ್ಲಿಸರಾಲ್‌, ಹೈಡ್ರೋಜನ್ ಫೆರಾಕ್ಸೈಡ್‌ ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ. ಸದ್ಯ ದಕ್ಷಿಣ ಕನ್ನಡದಿಂದ ಅಗತ್ಯ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಸಿಬ್ಬಂದಿ ಹಾಗೂ ಕಚ್ಛಾವಸ್ತುಗಳು ಅಗತ್ಯ ಪ್ರಮಾಣದಲ್ಲಿ ಸಿಕ್ಕರೆ ಮಾರುಕಟ್ಟೆಗೂ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT