ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೀಷ್ ಮೇಲೆ ಪ್ರೀತಿ; ಕನ್ನಡಕ್ಕೆ ಮಕ್ಕಳ ಕೊರತೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳ
Last Updated 13 ಜೂನ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಕಲಿಯಬೇಕು ಎಂಬ ಸರ್ಕಾರದ ಆಶಯಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ಮಾಧ್ಯಮ ಕಲಿಕೆಗೆ ನಿರುತ್ಸಾಹ ತೋರಿರುವುದೂ ಕಂಡುಬಂದಿದೆ.

ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿಆಂಗ್ಲಮಾಧ್ಯಮ ಬೋಧಿಸುವ ಸಾಮರ್ಥ್ಯವಿರುವ 22 ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದೆ. ಇದರಲ್ಲಿ 8 ಕೆಪಿಎಸ್‌ (ಪಬ್ಲಿಕ್) ಶಾಲೆಗಳು ಸೇರಿವೆ. ಜಿಲ್ಲೆಯಾದ್ಯಂತ ದಾಖಲಾತಿ ನಡೆಯುತ್ತಿದ್ದು, ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

22 ಶಾಲೆಗಳ ಪೈಕಿ 10 ಶಾಲೆಗಳಲ್ಲಿ ನಿಗಧಿಗಿಂತ ಹೆಚ್ಚು ಮಕ್ಕಳು ಇಂಗ್ಲೀಷ್ ಮಾಧ್ಯಮಕ್ಕೆ ಪ್ರವೇಶ ಪಡೆದಿದ್ದಾರೆ. ಬ್ರಹ್ಮಾವರ ಜಿಎಂಎಚ್‌ಪಿಎಸ್‌ ಶಾಲೆಯಲ್ಲಿ 63, ಬೈಂದೂರು ವಲಯದ ಉಪ್ಪುಂದ ಜಿಎಚ್‌ಪಿಎಸ್‌ ಶಾಲೆಯಲ್ಲಿ 61, ವಂಡ್ಸೆ ಶಾಲೆಯಲ್ಲಿ 36 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕಾರ್ಕಳ ವಲಯ ವ್ಯಾಪ್ತಿಯ ಹೆಬ್ರಿ ಶಾಲೆಗೆ 35, ಮುನಿಯಾಲು ಶಾಲೆಗೆ 41, ಪೆರ್ವಾಜೆ ಶಾಲೆಗೆ 40, ಕುಂದಾಪುರ ವಲಯ ವ್ಯಾಪ್ತಿಯ ಬಿದ್ಕಲ್‌ಕಟ್ಟೆ 46, ತೆಕ್ಕಟ್ಟೆ ಶಾಲೆಯಲ್ಲಿ 86 ವಿದ್ಯಾರ್ಥಿಗಳು ದಾಖಲಾಗಿದರೆ, ಉಡುಪಿ ವಲಯದ ಹಿರಿಯಡ್ಕ ಶಾಲೆಗೆ 36, ವಳಕಾಡು ಶಾಲೆಗೆ 30 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 677 ವಿದ್ಯಾರ್ಥಿಗಳು ಇಂಗ್ಲೀಷ್ ಮಾಧ್ಯಮಕ್ಕೆ ದಾಖಲಾಗಿದ್ದು, ಈ ಪೈಕಿ 316 ಬಾಲಕರು, 361 ಬಾಲಕಿಯರು ಸೇರಿದ್ದಾರೆ. ಇಂಗ್ಲೀಷ್ ಮಾಧ್ಯಮಕ್ಕೆ ಬೇಡಿಕೆಯಿದ್ದು, ದಾಖಲಾತಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಕನ್ನಡ ಮಾಧ್ಯಮಕ್ಕೆ ಮಕ್ಕಳಿಲ್ಲ:ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿರುವ 5 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಒಬ್ಬ ವಿದ್ಯಾರ್ಥಿಯೂ ಇಲ್ಲ. ಬೈಂದೂರು ವಲಯದ ದೊಂಬೆ, ಕಾರ್ಕಳ ವಲಯದ ಹೆಬ್ರಿ, ಕುಂದಾಪುರ ವಲಯದ ಬಿದ್ಕಲ್‌ಕಟ್ಟೆ, ಬೀಜಾಡಿ ಪಡು, ಉಡುಪಿ ವಲಯದ ಪಡುಬಿದ್ರಿ ನಾಡ್ಸಾಲ್ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಇದೆ.

ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬೇಡಿಕೆ: ಕೆಪಿಎಸ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿದ್ದು, ಕೊಕ್ಕರ್ಣೆ ಶಾಲೆಯಲ್ಲಿ ಎಲ್‌ಕೆಜಿಗೆ 45, ಯುಕೆಜಿಗೆ 36, ನೆಂಪು ಶಾಲೆಯಲ್ಲಿ 23, ಉಪ್ಪುಂದ ಶಾಲೆಯಲ್ಲಿ ಎಲ್‌ಕೆಜಿ 67, ಯುಕೆಜಿ 73, ವಂಡ್ಸೆ ಶಾಲೆಯಲ್ಲಿ ಎಲ್‌ಕೆಜಿ 38, ಯುಕೆಜಿ 40, ಹೆಬ್ರಿ ಶಾಲೆಯಲ್ಲಿ ಎಲ್‌ಕೆಜಿ 11, ಯುಕೆಜಿ 14, ಹೊಸ್ಮಾರು ಈದು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಗೆ ತಲಾ 24, ಮುನಿಯಾಲು ಶಾಲೆಯಲ್ಲಿ ತಲಾ 50, ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಎಲ್‌ಕೆಜಿ 19, ಯುಕೆಜಿ 40, ಕೋಟೇಶ್ವರ ಶಾಲೆಯಲ್ಲಿ ಎಲ್‌ಕೆಜಿಗೆ 30, ಪಡುಬಿದ್ರಿ ನಾಡ್ಸಾಲ್ ಶಾಲೆಯಲ್ಲಿ ಎಲ್‌ಕೆಜಿಗೆ 8, ಯುಕೆಜಿಗೆ 10, ಹಿರಿಯಡ್ಕ ಶಾಲೆಯಲ್ಲಿ 68 ಮಕ್ಕಳು ಪ್ರವೇಶ ಪಡೆದಿದ್ದಾರೆ.

ಈ ವರ್ಷ ಎಲ್‌ಕೆಜಿಗೆ ಮಾತ್ರ ಪ್ರವೇಶಾತಿಗೆ ಅವಕಾಶವಿದ್ದರೂ ಕೆಲವು ಶಾಲೆಗಳಲ್ಲಿ ಯುಕೆಜಿಗೂ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಯುಕೆಜಿ ಮಕ್ಕಳನ್ನು ಮುಂದೆ ಒಂದನೇ ತರಗತಿಗೆ ಸೇರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT