ಉಡುಪಿ: ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶದಿಂದ ಆರೋಗ್ಯ ಹಾಗೂ ಆಯುಷ್ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಸಮಾನ ಆದ್ಯತೆ ನೀಡುತ್ತಿದ್ದಾರೆ. ಆಯುರ್ವೇದ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿದ್ದು, ಆಯುರ್ವೇದಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ ಎಂದುಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೊನೊವಾಲ ಹೇಳಿದರು.
ಶನಿವಾರ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ₹ 25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರತ್ನಶ್ರೀ ಆರೋಗ್ಯಧಾಮ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದ್ದು, ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿ ಬೆಳೆಸುವ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಒತ್ತು ನೀಡಲಾಗುತ್ತಿದೆ. 2014ರಲ್ಲಿ ಸ್ಥಾಪನೆಯಾದ ಆಯಷ್ ಇಲಾಖೆಯು ಆಯುರ್ವೇದವನ್ನು ವಿಶ್ವಮಾನ್ಯಗೊಳಿಸಲು ಹಾಗೂ ಜನರಿಗೆ ಹತ್ತಿರವಾಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಅಲೋಪತಿ, ಆಯುರ್ವೇದ ಸೇರಿದಂತೆ ಎಲ್ಲ ವೈದ್ಯ ಪದ್ಧತಿಗಳ ಗುರಿಯೂ ಜನರ ಆರೋಗ್ಯ ಕಾಪಾಡುವುದೇ ಆಗಿದ್ದು, ಆಯುರ್ವೇದವನ್ನು ಹೆಚ್ಚೆಚ್ಚು ಬಳಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡೋಣ. ಪ್ರಧಾನಿ ನರೇಂದ್ರ ಮೋದಿ ಅವರ ನವಭಾರತ ನಿರ್ಮಾಣ ಸಂಕಲ್ಪಕ್ಕೆ ಕೈ ಜೋಡಿಸೋಣ ಎಂದರು.
ಪ್ರತಿ ಗಿಡದಲ್ಲಿರುವ ಔಷಧೀಯ ಗುಣಗಳನ್ನು ಅಧ್ಯಯನ ಮಾಡುವ ಹಾಗೂ ಸಂಶೋಧನಾ ಕಾರ್ಯಕ್ಕೆ ಆಯುಷ್ ಇಲಾಖೆ ಒತ್ತು ನೀಡುತ್ತಿದೆ. ಎಲ್ಲ ಕಾಯಿಲೆಗಳಿಗೂ ಆಯುರ್ವೇದ ಪರಿಹಾರವಾಗಬೇಕು ಎಂಬುದು ಇಲಾಖೆಯ ಆಶಯ ಎಂದರು.
ಆಯುರ್ವೇದ ಕ್ಷೇತ್ರ ಅಂತರರಾಷ್ಟ್ರೀಯ ಮಾನ್ಯತೆ ಪಡೆಯಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಕೊಡುಗೆ ದೊಡ್ಡದು. ಎಸ್‌ಡಿಎಂ ಆಯುರ್ವೇದ ಉತ್ಪನ್ನಗಳ ವಿಶ್ವಾಸಾರ್ಹತೆ ಹಾಗೂ ಜನಪ್ರಿಯತೆಯಿಂದ ಆಯುರ್ವೇದದತ್ತ ರೋಗಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆಯುಷ್ ಇಲಾಖೆಗೂ ಬಲ ಸಿಕ್ಕಂತಾಗಿದೆ ಎಂದರು ಸರ್ಬಾನಂದ ಸೊನೊವಾಲ ಶ್ಲಾಘಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿಶ್ವದಾದ್ಯಂತ ಆಯುರ್ವೇದಕ್ಕೆ ಮಾನ್ಯತೆ ಬಂದಿದೆ. ಸಾಮಾನ್ಯ ಜನರಿಗೆ ಆಯುರ್ವೇದ ಪದ್ಧತಿಯ ಮೇಲೆ ವಿಶ್ವಾಸ ಬರಬೇಕು. ಆಯುರ್ವೇದ ಕೊನೆಯ ಆಯ್ಕೆಯಾಗಿರದೆ ರೋಗಿಗಳ ಮೊದಲ ಆಯ್ಕೆ ಆಗಬೇಕು ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಆಯುರ್ವೇದ ಕ್ಷೇತ್ರದಲ್ಲಿ ಪರಿಪೂರ್ಣತೆ, ಸಮರ್ಪಣೆಯಿಂದಾಗಿ ಎಸ್‌ಡಿಎಂ ಸಂಸ್ಥೆ ಯಶಸ್ಸು ಪಡೆದುಕೊಂಡಿದೆ. ರೂಡ್‌ಸೆಟ್ ಮೂಲಕ ಗ್ರಾಮೀಣಾಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವು ನೀಡುತ್ತಿದೆ. ಮದ್ಯಮುಕ್ತ ರಾಜ್ಯ ನಿರ್ಮಾಣದ ಹಿಂದೆಯೂ ಧರ್ಮಸ್ಥಳ ಸಂಸ್ಥೆಯ ಶ್ರಮ ದೊಡ್ಡದು ಎಂದರು.
ಸರ್ಕಾರಗಳು ಮಾಡಬೇಕಾದ ಕಾರ್ಯವನ್ನು ಎಸ್‌ಡಿಎಂ ಮಾಡುತ್ತಿದ್ದು, ಮಾದರಿಯಾಗಿದೆ. ಸರ್ಕಾರ ನೀತಿಗಳ ರಚನೆ ಮಾಡುವಾಗ ಧರ್ಮಸ್ಥಳದ ಧರ್ಮಾಧಿಕಾರಿಗಳ ಅಭಿಪ್ರಾಯ ಹಾಗೂ ಸಲಹೆ ಪಡೆಯುವ ಮಟ್ಟಕ್ಕೆ ಸಂಸ್ಥೆ ಬೆಳೆದಿದೆ ಎಂದರು.
ಸಮಾಜ ಕಲ್ಯಾಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕ ಡಿ.ಶ್ರೇಯಸ್ ಕುಮಾರ್, ವಾಸ್ತುಶಿಲ್ಪಿ ಗೋಪಾಲ್ ಭಟ್ ಮತ್ತು ಗುತ್ತಿಗೆದಾರ ಎಂ.ಡಿ. ಗಣೇಶ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ವಿ. ಮಮತಾ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.