ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಪೀಳಿಗೆಯಲ್ಲಿ ವಚನ ಸಾಹಿತ್ಯದ ಬೀಜ ಬಿತ್ತಬೇಕಿದೆ

ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 2 ಆಗಸ್ಟ್ 2019, 14:49 IST
ಅಕ್ಷರ ಗಾತ್ರ

ಉಡುಪಿ: ಸಮಾಜದಲ್ಲಿ ಮೌಢ್ಯ ವಿಸ್ತಾರವಾಗಿ ಹರಡಿಕೊಂಡಿದೆ. ದೃಶ್ಯ ಮಾಧ್ಯಮಗಳು ಮೌಢ್ಯ ಸಾರಲು ಸ್ಪರ್ಧೆಗಳಿದಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಬುದ್ಧಿಯ ಸದ್ಭಳಕೆ ಮಾಡಿಕೊಂಡರೆ ಮೌಢ್ಯಗಳಿಂದ ದೂರ ಇರಬಹುದು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಚಾರವಂತ, ಸತ್ಯವಂತ, ಪ್ರಾಮಾಣಿಕನಾಗಿ ಬದುಕಿದರೆ ಗುಡಿಯ ದೇವರ ಪೂಜಿಸುವ ಅಗತ್ಯವಿಲ್ಲ. ನಾವೇ ದೇವರಂತೆ. ಆದರೆ, ಮನುಷ್ಯರು ತಮ್ಮನ್ನು ದೆವ್ವಗಳು ಎಂದು ಭಾವಿಸಿದ್ದಾರೆ. ಇಂತಹ ತಪ್ಪು ಕಲ್ಪನೆಯನ್ನು ತೊಡೆದುಹಾಕಬೇಕಿದೆ’ ಎಂದರು.

ವಚನ ಸಾಹಿತ್ಯದ ಬೀಜವನ್ನು ಯುವಪೀಳಿಗೆಯ ತಲೆಯಲ್ಲಿ ಬಿತ್ತುವುದೇ ‘ಮತ್ತೆ ಕಲ್ಯಾಣ’ದ ಉದ್ದೇಶ. ಕುಲ ಎಂದರೆ ಜಾತಿ ಸೂಚಕವಲ್ಲ. ನೀರಿಗೆ, ಗಾಳಿಗೆ, ನೆಲಕ್ಕೆ ಜಾತಿಯ ಬೇಧ ಇಲ್ಲ. ಅರಿವು ಹಾಗೂ ಆಚಾರ ಒಂದಾದರೆ ಜಾತಿ ಎಂಬ ಭೂತವನ್ನು ದೂರವಿಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನೀತಿಯಿಂದ ನಡೆದುಕೊಂಡವ ಶ್ರೇಷ್ಠ. ದುರಾಚಾರದಿಂದ ನಡೆದುಕೊಂಡವ ಕನಿಷ್ಠ. ಗುಡಿ ಸುತ್ತಲು, ಮರ ಸುತ್ತಲು ಶರಣರು ಹೇಳಿಲ್ಲ. ಸದಾಚಾರದಲ್ಲಿ ಸಾಗುವವರು ಮಾತ್ರ ಭಕ್ತರು ಎಂದು ಶರಣರು ಹೇಳಿದ್ದಾರೆ. ಈ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಸಾಹಿತಿ ನಾ.ಮೊಗಸಾಲೆ ಮಾತನಾಡಿ, ‘ವಚನಗಳು ಎಂದರೆ, ಪ್ರತಿಜ್ಞೆ, ಬದ್ಧತೆ. ನುಡಿದಂತೆ ನಡೆಯುವುದೇ ಧರ್ಮ ಪಾಲನೆ. ವಿನಯ ಇಲ್ಲದ ಧರ್ಮ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ವಚನ ಧರ್ಮವು ಸಂಸ್ಕೃತಿಯಿಂದ ಹುಟ್ಟಿ, ಅದನ್ನು ಬೆಳೆಸಿ, ಉಳಿಸುವ ಧರ್ಮವಾಗಿದೆ. ಧರ್ಮ ಎಂದರೆ ಪ್ರಾಣಿ ಸ್ವರೂಪದಿಂದ ಮನುಷ್ಯತ್ವದೆಡೆಗಿನ ಬದಲಾವಣೆ.ಮನಃಸಾಕ್ಷಿಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು.

ಆದರೆ, ಪ್ರಸ್ತುತ ಯಾವುದು ಅಧರ್ಮವೋ ಅದನ್ನೇ ಧರ್ಮ ಎಂದು ನಂಬಲಾಗುತ್ತಿದೆ. ಪುರೋಹಿತರು ಹೇಳಿದ್ದೇ ಧರ್ಮ ಎಂದು ಜನರು ಭಾವಿಸಿ ಅನುಸರಿಸುತ್ತಿದ್ದಾರೆ. ಸಮಾಜದಲ್ಲಿ ಜೀವನ ಮೌಲ್ಯ ಮರೆಯಾಗಿದೆ ಎಂದು ವಿಷಾಧಿಸಿದರು.

ಚಿಂತಕರಾದ ಜಿ.ಎಸ್‌.ನಾಗರಾಜ್ ಮಾತನಾಡಿ, ‘ಭಾರತ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಆದರೆ, ಇಲ್ಲಿನ ಮೌಢ್ಯದ ಬಗ್ಗೆ ತುಂಬಾ ನೋವಿದೆ. 21ನೇ ಶತಮಾನದಲ್ಲಿಯೇ ಮೌಢ್ಯತೆ, ಜಾತೀಯತೆ ಹೆಚ್ಚಿರುವಾಗ 12ನೇ ಶತಮಾನದಲ್ಲಿದ್ದ ಸ್ಥಿತಿಯನ್ನು ಊಹಿಸಿಕೊಂಡರೆ ಭಯವಾಗುತ್ತದೆ’ ಎಂದರು.

ಶರಣರು ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಹೇಳಿದ್ದರು. ಆದರೆ, ಇಂದು ಸಮಾಜದಲ್ಲಿ ದಯೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ವಚನ ಸಾಹಿತ್ಯದ ತಿಳಿವಳಿಕೆ ಎಲ್ಲರಿಗೂ ಸಿಗಬೇಕು. ಎಲ್ಲರನ್ನೂ ಒಳಗೊಂಡು ಸಾಗುವುದೇ ಧರ್ಮ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT