ಸೋಮವಾರ, ಜನವರಿ 25, 2021
26 °C
₹ 9.38 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಸಿಸಿಟಿವಿ ಕ್ಯಾಮೆರಾ ಸಾಕ್ಷ್ಯದಿಂದ ಸಿಕ್ಕಿಬಿದ್ದ ಕಳ್ಳ

ಸರಣಿ ಸರಗಳವು ಆರೋಪಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಸರಣಿ ಸರಗಳವು ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ₹ 9.38 ಲಕ್ಷ ಮೌಲ್ಯದ 172 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಚಂದ್ರಶೇಖರ್ ಬಂಧಿತ ಆರೋಪಿ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಉಡುಪಿಯ ಕುಕ್ಕಿಕಟ್ಟೆ ಜಂಕ್ಷನ್‌ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ವಿಷ್ಣುವರ್ಧನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲೆಲ್ಲಿ ಸರಗಳವು:

ಉಡುಪಿ ನಗರ ವ್ಯಾಪ್ತಿಯಲ್ಲಿ 4, ಮಣಿಪಾಲ ವ್ಯಾಪ್ತಿಯಲ್ಲಿ 2, ಪಡುಬಿದ್ರೆ ಠಾಣೆಯ ವ್ಯಾಪ್ತಿಯಲ್ಲಿ 1, ಮಂಗಳೂರು ನಗರದ ಕದ್ರಿ, ಮೂಲ್ಕಿಯಲ್ಲಿ ತಲಾ ಒಂದೊಂದು ಕಡೆಗಳಲ್ಲಿ ಆರೋಪಿ ಮಹಿಳೆಯರ ಸರಗಳವು ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಬಲೆಗೆ ಬಿದ್ದಿದ್ದು ಹೇಗೆ:

ಉಡುಪಿ, ಮಂಗಳೂರಿನಲ್ಲಿ ಸರಗಳವು ಹೆಚ್ಚಾದ ಹಿನ್ನೆಲೆಯಲ್ಲಿ ಎಎಸ್‌ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಟಿ.ಆರ್.ಜೈಶಂಕರ್, ಕಾರ್ಕಳ ಡಿವೈಎಸ್‌ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಉಡುಪಿ ನಗರ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಡಿಸಿಐಬಿ ಘಟಕದ ಇನ್‌ಸ್ಪೆಕ್ಟರ್ ಡಿ.ಆರ್‌.ಮಂಜಪ್ಪ, ಮಣಿಪಾಲ ಇನ್‌ಸ್ಪೆಕ್ಟರ್ ಮಂಜುನಾಥ ನೇತೃತ್ವದ ಮೂರು ತಂಡಗಳನ್ನು ರಚಿಸಲಾಗಿತ್ತು.

ನಗರದಲ್ಲಿ ಸರಗಳವು ನಡೆದ ಕಡೆಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯು ಕೃತ್ಯಕ್ಕೆ ಬಳಸಿದ್ದ ಬೈಕ್‌ನ ಮಾಹಿತಿ ದೊರೆತಿತ್ತು. ಅದೇ ಮಾದರಿಯ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಜ.3ರಂದು ಸಂಶಯಾಸ್ಪದ ರೀತಿಯಲ್ಲಿ ಅಲೆವೂರಿನಿಂದ ಡಯಾನಾ ಕಡೆಗೆ ಸಂಚರಿಸುತ್ತಿರುವ ಮಾಹಿತಿ ದೊರೆಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸವಲ್ಲಿ ಯಶಸ್ವಿಯಾದರು ಎಂದು ಎಸ್‌ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು.

ಟೆಸ್ಟ್‌ರೈಡ್‌ಗೆ ಪಡೆದು ಪರಾರಿ:

ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆಯಲ್ಲಿರುವ ಸೆಕೆಂಡ್ ಹ್ಯಾಂಡ್ ಬಜಾರ್‌ನಿಂದ ಬೈಕ್ ಖರೀದಿಸುವುದಾಗಿ ಟೆಸ್ಟ್ ಡ್ರೈವ್‌ಗೆ ವಾಹನ ಪಡೆದು, ಸರಗಳವಿಗೆ ಬಳಕೆ ಮಾಡಿದ್ದ. ಮಂಗಳೂರಿನ ಬರ್ಕೆ, ಮಣಿಪಾಲ, ಕಂಕನಾಡಿಯಿಂದಲೂ ತಲಾ ಒಂದೊಂದು ಬೈಕ್‌ ಪಡೆದಿದ್ದು, ಆರೋಪಿಯಿಂದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಹಿಂದೆ, ಪಾಂಡೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಸರಗಳವು ಪ್ರಕರಣಲ್ಲಿಯೂ ಭಾಗಿಯಾಗಿದ್ದು, ಇನ್ನೂ ಹಲವು ಕಡೆಗಳಲ್ಲಿ ಕೃತ್ಯ ನಡೆಸಿರುವ ಶಂಕೆ ಇದೆ. ಹಾಗಾಗಿ, ಉಡುಪಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಕಾಪು ಸಿಪಿಐ ಪ್ರಕಾಶ್ ಹಾಗೂ ಸಿಬ್ಬಂದಿ, ಉಡುಪಿ ನಗರ ಠಾಣೆ ಪಿಎಸ್‌ಐ ಶಕ್ತಿವೇಲು, ಅಪರಾಧ ವಿಭಾಗದ ಪಿಎಸ್‌ಐ ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿ, ಮಣಿಪಾಲ ಪಿಎಸ್ಐ ರಾಜಶೇಖರ್ ಹಾಗೂ ಸಿಬ್ಬಂದಿ, ಮಲ್ಪೆ ಪಿಎಸ್‌ಐ ಬಿ.ಎನ್‌.ತಿಮ್ಮೇಶ್ ಹಾಗೂ ಸಿಬ್ಬಂದಿ, ಕಾಪು ಪಿಎಸ್‌ಐ ರಾಘವೇಂದ್ರ ಹಾಗೂ ಸಿಬ್ಬಂದಿ, ಪಡುಬಿದ್ರಿ ಠಾಣೆಯ ಸಿಬ್ಬಂದಿ, ಉಡುಪಿ ಸಂಚಾರ ಠಾಣೆ ಪಿಎಸ್‌ಐ ಅಬ್ದುಲ್ ಖಾದರ್, ಶೇಖರ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.