ಶನಿವಾರ, ಸೆಪ್ಟೆಂಬರ್ 25, 2021
22 °C
ಶಿರ್ವ ಗ್ರಾ.ಪಂ.: ತಂತ್ರಜ್ಞಾನದ ಮೂಲಕ ಆಯೋಜನೆ

ಆನ್‍ಲೈನ್ ಗ್ರಾಮಸಭೆ– ವಿನೂತನ ಪ್ರಯತ್ನ

ಪ್ರಕಾಶ ಸುವರ್ಣ ಕಟಪಾಡಿ Updated:

ಅಕ್ಷರ ಗಾತ್ರ : | |

Prajavani

ಶಿರ್ವ: ಪಂಚಾಯಿತಿ ರಾಜ್ ವ್ಯವಸ್ಥೆ ಅಡಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಗ್ರಾಮಸಭೆ ಕಲಾಪಗಳನ್ನು ಆನ್‍ಲೈನ್ ನೇರ ಪ್ರಸಾರ ಮಾಡುವ ವಿನೂತನ ಪ್ರಯತ್ನಕ್ಕೆ ಶಿರ್ವ ಗ್ರಾಮ ಪಂಚಾಯಿತಿ ಮುಂದಾಗಿದೆ.

ಕೋವಿಡ್‌ ಭೀತಿ ನಡುವೆಯೂ ಗ್ರಾಮಸಭೆಯನ್ನು ರದ್ದುಗೊಳಿಸದೆ, ಸಭೆ ನಡೆಸಲು ಆಧುನಿಕ ತಂತ್ರಜ್ಞಾನ ಬಳಸಿಕೊಂಡಿದೆ. ಶಿರ್ವ ಗ್ರಾಮ ಪಂಚಾಯಿತಿ ಆಡಳಿತದ ವಿನೂತನ ಆಲೋಚನೆ ಜಿಲ್ಲೆಯ ಇತರ ಗ್ರಾಮ ಪಂಚಾಯಿತಿಗೆ ಮಾದರಿಯಾಗಿದೆ.

ಸೋಮವಾರ (ಜು.19) ಬೆಳಿಗ್ಗೆ 10.30ಕ್ಕೆ ಮಹಿಳಾ ಸೌಧದಲ್ಲಿ ಆನ್‍ಲೈನ್ ಗ್ರಾಮಸಭೆ ನಡೆಸಲು ಶಿರ್ವ ಪಂಚಾಯಿತಿ ಆಡಳಿತವು ಸಿದ್ಧತೆ ಮಾಡಿಕೊಂಡಿದೆ. ಕೋವಿಡ್‌ ಭೀತಿ, ನಿರಂತರ ಮಳೆಗಾಳಿ ಕಾರಣಕ್ಕೆ ಜನರು ಮನೆ ಬಿಟ್ಟು ಹೊರ ಬರುವುದೇ ಕಷ್ಟ. ಇಂತಹ ದಿನಗಳಲ್ಲಿ ಲಭ್ಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗ್ರಾಮಸ್ಥರು ಮನೆಯಿಂದಲೇ ಗ್ರಾಮ ಸಭೆ ಕಾರ್ಯಕ್ರಮ ವೀಕ್ಷಣೆ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ.

https://tinyurl.com/ShirvaGramaSabhe ಲಿಂಕ್ ಮೂಲಕ ಸಭೆಯಲ್ಲಿ ಭಾಗವಹಿಸಬಹುದು. ಗ್ರಾಮದ ಅಭಿವೃದ್ಧಿ ವಿಚಾರಗಳ ಪರಿಶೀಲನೆ, ವಿಮರ್ಶೆ, ಸಾರ್ವಜನಿಕರ ಅರ್ಜಿ ವಿಚಾರಣೆ, ವಿವಿಧ ಕ್ರಿಯಾ ಯೋಜನೆಗಳ ಬಗ್ಗೆ ಗ್ರಾಮ ಸಭೆಯಲ್ಲಿ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್.

ಶಿರ್ವ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆಗಳು ಮಹತ್ವದ್ದಾಗಿದೆ. ಕೇಂದ್ರ, ರಾಜ್ಯ ಸರ್ಕಾರದ  ವಿವಿಧ ಯೋಜನೆಗಳ ಕುರಿತು ಮಾಹಿತಿಗಳನ್ನು ಗ್ರಾಮಸ್ಥರಿಗೆ ನೀಡುವುದು ಮುಖ್ಯ. ಆನ್‍ಲೈನ್ ಹೊರತುಪಡಿಸಿ ಗ್ರಾಮ ಸಭೆಯಲ್ಲಿ ವೈಯಕ್ತಿಕವಾಗಿ ಹಾಜರಾ ಗುವವರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಗುವುದು. ಸ್ಯಾನಿಟೈಸರ್ ಬಳಸಲು ಮತ್ತು  ಅಂತರ ಕಾಯ್ದು ಕೊಳ್ಳಲು ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ ಎಂದು ಶಿರ್ವ ಗ್ರಾಮ ಪಿಡಿಒ ಅನಂತ ಪದ್ಮನಾಭ ನಾಯಕ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು