ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲಿಗ್ ಸಭೆಯಿಂದ ಬಂದ ಕೆಲವರು ನಾಪತ್ತೆ: ಸಂಸದೆ ಶೋಭಾ ಕರಂದ್ಲಾಜೆ ಆತಂಕ

Last Updated 5 ಏಪ್ರಿಲ್ 2020, 14:27 IST
ಅಕ್ಷರ ಗಾತ್ರ

ಉಡುಪಿ:ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ಈಚೆಗೆ ನಡೆದ ತಬ್ಲಿಗ್ ಸಭೆಯಲ್ಲಿ ಭಾಗವಹಿಸಿದ್ದ ಹಲವರು ನಾಪತ್ತೆಯಾಗಿರುವುದು ಆತಂಕಕಾರಿ ವಿಚಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ತಬ್ಲಿಗ್ ಸಭೆಯಲ್ಲಿ ಭಾಗವಹಿಸಿದವರು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಎಂದು ಸರ್ಕಾರ ಸೂಚನೆ ನೀಡಿದ್ದರೂ ಕೆಲವರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಬ್ಲಿಗ್ ಸಭೆಯಲ್ಲಿ ಉಡುಪಿ ಜಿಲ್ಲೆಯ ಯಾರೂ ಭಾಗವಹಿಸಿಲ್ಲ. ಆದರೆ, ಸಭೆ ನಡೆದ ದಿನ ಮಸೀದಿಯ ಸಮೀಪದ ಬಸ್‌ ಹಾಗೂ ರೈಲುಗಳಲ್ಲಿ ಓಡಾಡಿದವರನ್ನು ಮೊಬೈಲ್‌ ಲೊಕೇಷನ್‌ ಸಹಾಯದಿಂದ ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿಡಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.

ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಹಾಗೂ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದಿರುವ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ 95 ಕ್ವಿಂಟಲ್‌ ಅಕ್ಕಿ ಹಾಗೂ ಅಗತ್ಯ ದಿನಸಿ ವಸ್ತುಗಳನ್ನು ಹಂಚಲಾಗುತ್ತಿದೆ.

ಪಡಿತರ ಕಾರ್ಡ್‌ ಇಲ್ಲದವರಿಗೆ ಆಹಾರದ ಕಿಟ್‌ ವಿತರಿಸಲಾಗುವುದು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಶಾಸಕರ ನೇತೃತ್ವದಲ್ಲಿ ಕಿಟ್ ವಿತರಣೆ ನಡೆಯುತ್ತಿದೆ ಎಂದರು. ಸಾರ್ವಜನಿಕರಿಗೆ ತೊಂದರೆಗಳಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಬಹುದು. ಅಕ್ಕಪಕ್ಕದಲ್ಲಿ ಆಹಾರ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರೆ, ಗಮನಕ್ಕೆ ತಂದರೆ ತಕ್ಷಣ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಭಾನುವಾರ ಶಾಸಕರ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಜಿಲ್ಲೆಯಲ್ಲಿ ಮೂವರಿಗೆ ಸೋಂಕು ತಗುಲಿದ್ದು, ಸೋಂಕಿತರ ಪೈಕಿ ಒಬ್ಬ ಮೂರು ಜನ, ಮತ್ತೊಬ್ಬ 37 ಜನ ಹಾಗೂ ಮೂರನೇ ವ್ಯಕ್ತಿ ಮೂರು ಜನರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ವಿಚಾರ ಪತ್ತೆಹಚ್ಚಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಹೊಸ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ವಿದೇಶದಿಂದ ಬಂದವರಲ್ಲಿಯೂ ಸೋಂಕು ದೃಢಪಟ್ಟಿಲ್ಲ. ಜಿಲ್ಲಾಧಿಕಾರಿ ಜತೆ ರಾಜ್ಯ ಸರ್ಕಾರ ಪ್ರತಿದಿನ ವಿಡಿಯೋ ಸಂವಾದ ನಡೆಸುತ್ತಿದ್ದು, ಮಾಹಿತಿ ಪಡೆದುಕೊಳ್ಳುತ್ತಿದೆ. ಜಿಲ್ಲೆಯ ಅಧಿಕಾರಿಗಳು, ಪೊಲೀಸರು ಆರೋಗ್ಯ ಇಲಾಖೆಯವರ ಶ್ರಮದಿಂದ ಸೋಂಕು ನಿಯಂತ್ರಣದಲ್ಲಿದೆ ಎಂದರು.

ರಾಜ್ಯಕ್ಕೂ ದೇಣಿಗೆ

ಪ್ರಧಾನಿ ಸೂಚನೆ ಮೇರೆಗೆ ಪಿಎಂ ಕೇರ್ ನಿಧಿಗೆ ಸಂಸದರು ₹ 1 ಕೋಟಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಕೇಳಿದರೂ ಕೊಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ರಸ್ತೆ, ಸೇತುವೆಗಳನ್ನು ಕಟ್ಟುವುದಕ್ಕಿಂತ ಮನುಷ್ಯನ ಜೀವ ಉಳಿಸುವುದು ಅಗತ್ಯದ ಕೆಲಸ ಎಂದು ಶೋಭಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT