ಗುರುವಾರ , ಮಾರ್ಚ್ 30, 2023
24 °C
ಕೇಂದ್ರ ಕೃಷಿ ಹಾಗೂ ರೈತರ ಅಭಿವೃದ್ಧಿ ರಾಜ್ಯ ಖಾತೆ ಸಚಿವೆಯಾಗಿ ಶೋಭಾ ಕರಂದ್ಲಾಜೆ ದೆಹಲಿಯಲ್ಲಿ ಅಧಿಕಾರ ಸ್ವೀಕಾರ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೇಲೆ ನೂರಾರು ನಿರೀಕ್ಷೆಗಳು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಿಕ್ಕಿದೆ. ಈ ಮೂಲಕ ರಾಜ್ಯದ ರೈತರ ಪರವಾಗಿ ಕೆಲಸ ಮಾಡುವ, ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ದೊರೆತಿದೆ.

ನಿರೀಕ್ಷೆಗಳು ನೂರಾರು: ಶೋಭಾ ಕರಂದ್ಲಾಜೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಕಾರಣ ಹಾಗೂ ಕರಾವಳಿ ಮಲೆನಾಡು ಭಾಗದ ಸಂಸದೆಯಾಗಿರುವ ಸಹಜವಾಗಿ ಎರಡೂ ಭಾಗದ ರೈತರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ದಶಕಗಳಿಂದ ಬಗೆಹರಿಯದ ಕೃಷಿ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ಸಿಗಬಹುದು. ಕೃಷಿಯಲ್ಲಿ ಖುಷಿ ಕಾಣಬಹುದು ಎಂಬ ವಿಶ್ವಾಸದಲ್ಲಿದ್ದಾರೆ ರೈತರು.

ನಿರೀಕ್ಷೆಗಳು ಏನು?

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕಾಡಂಚಿನ ಕೃಷಿ ಮಾಡುವ ಪ್ರಮಾಣ ಹೆಚ್ಚಾಗಿದ್ದು, ಬೆಳೆದ ಫಸಲು ಪೂರ್ಣ ಪ್ರಮಾಣದಲ್ಲಿ ರೈತರ ಕೈ ಸೇರುತ್ತಿಲ್ಲ. ಕಾಡು ಹಂದಿ, ಕಾಡು ಕೋಣ, ಜಿಂಕೆ, ನವಿಲು, ಮಂಗಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು ಎಂಬುದು ಭಾರತೀಯ ಕಿಸಾನ್ ಸಂಘದ ಒತ್ತಾಯ.

ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಅರ್ಧದಷ್ಟು ಆದಾಯ ಕಳೆದುಕೊಳ್ಳುತ್ತಿದ್ದಾರೆ. ಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಗೆ ಅರಣ್ಯದಲ್ಲಿ ಹಣ್ಣುಬಿಡುವ ಗಿಡಗಳನ್ನು ಹೆಚ್ಚಾಗಿ ನೆಡಬಹುದು. ಕಾಡಂಚಿನಲ್ಲಿ ದೊಡ್ಡ ಗುಂಡಿಗಳನ್ನು ತೆಗೆದು ಪ್ರಾಣಿಗಳು ನಾಡಿಗೆ ಬರದಂತೆ ತಡೆಯಬಹುದು. ಮಂಗಗಳ ಹಾವಳಿ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಮೌಲ್ಯ ದೊರೆಯುತ್ತಿಲ್ಲ. ಕೃಷಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿದರೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ರೈತರಿಗೆ ಹೆಚ್ಚು ಆದಾಯ ಸಿಗಲಿದೆ. ಜತೆಗೆ, ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಯಾದರೆ ತೆಂಗಿನಕಾಯಿ, ಅಡಿಕೆ, ಕಬ್ಬು, ಭತ್ತ, ಗೋಡಂಬಿ, ಬಾಳೆಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು. ಕೃಷಿ ಲಾಭಧಾಯಕವಾಗಲಿದೆ ಎನ್ನುತ್ತಾರೆ ಸತ್ಯನಾರಾಯಣ ಉಡುಪ.

ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದೆ. ಹಳ್ಳಿಗಳನ್ನು ಬಿಟ್ಟು ಬಿಟ್ಟು ನಗರ ಸೇರಿರುವ ಯುವಕರು ಮತ್ತೆ ಕೃಷಿಯತ್ತ ಮುಖ ಮಾಡಲಿದ್ದಾರೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಹಡಿಲುಬಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯಲಿವೆ ಎನ್ನುತ್ತಾರೆ ರೈತ ಮುಖಂಡರು.

ಉಡುಪಿ ಮಲ್ಲಿಗೆ ಘಮಲು ಹರಡಲಿ: ಭೌಗೋಳಿಕ ಗುರುತಿನ ಮಾನ್ಯತೆ ಪಡೆದಿರುವ (ಜಿಐ) ಉಡುಪಿಯ ಪ್ರಸಿದ್ಧ ‘ಮಟ್ಟುಗುಳ್ಳ’ ಹಾಗೂ ಉಡುಪಿ ಮಲ್ಲಿಗೆ ಬೆಳೆಗೆ ಹೆಚ್ಚು ಉತ್ತೇಜನ ಸಿಗಬೇಕು. ಉಡುಪಿ ಮಲ್ಲಿಗೆ ಬೇಗ ಹಾಳಾಗುವ ಕಾರಣ ಮಲ್ಲಿಗೆಯಿಂದ ಸುಗಂಧ ದ್ರವ್ಯ ಸೇರಿದಂತೆ ಇತರ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಬೇಕು. ಮಟ್ಟುಗುಳ್ಳ ರಫ್ತಿಗೆ ಉತ್ತೇಜನ ನೀಡುವ ಮೂಲಕ ಈ ಭಾಗದ ಬೆಳೆಗಾರರ ಹಿತ ಕಾಯಬೇಕು ಎನ್ನುತ್ತಾರೆ ರೈತ ಮುಖಂಡರು.

***

‘ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಡ ಹಾಕಿ’

ಕರಾವಳಿಯವರೇ ಆದ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಿಕ್ಕಿರುವುದು ಸಂತೋಷ. ನೂತನ ಕೇಂದ್ರ ಸಚಿವರು ರೈತ ಪರವಾದ ಕಾಳಜಿ ಪ್ರದರ್ಶಿಸಬೇಕು. ರಸ ಗೊಬ್ಬರ ಬೆಲೆ ಇಳಿಕೆ, ಟ್ರ್ಯಾಕ್ಟರ್‌ಗಳಿಗೆ ಸಬ್ಸಿಡಿ, ಕೃಷಿ ಯಂತ್ರಗಳ ಬೆಲೆ ಇಳಿಕೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನಿಗದಿ, ಭೂ ಸುಧಾರಣಾ ಕಾಯ್ದೆಯಲ್ಲಿರುವ ರೈತ ವಿರೋಧ ನೀತಿಗಳನ್ನು ಕೈಬಿಡುವುದು, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಡ ಹೇರುವುದು, ಎಪಿಎಂಸಿಯ ಸ್ವಾಯತ್ತತೆ ಎತ್ತಿ ಹಿಡಿಯುವುದು, ಕೃಷಿ ಉತ್ಪನ್ನಗಳನ್ನು ಖರೀದಿಸುವ ಪೂರ್ಣಾಧಿಕಾರ ಎಪಿಎಂಸಿಗಳಿಗೆ ಕೊಡುವುದು, ಕಿರು ನೀರಾವರಿ ಯೋಜನೆಗಳಿಗೆ ಆದ್ಯತೆ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ರೈತರು ಗೌರವಯುತವಾಗಿ ಜೀವನ ನಡೆಸಲು ಬೇಕಾದ ಸೌಲಭ್ಯಗಳನ್ನು ಕೊಡಬೇಕು.

–ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

***

‘ಮೌಲ್ಯವರ್ಧಿತ ಉತ್ಪನ್ನಕ್ಕೆ ಒತ್ತುಕೊಡಿ’

ಶೋಭಾ ಕರಂದ್ಲಾಜೆ ಅವರಿಗೆ ಕರಾವಳಿಯ ರೈತರ ಸಮಸ್ಯೆಗಳ ಅರಿವಿದೆ. ಹಿಂದೆ ಭಾರತೀಯ ಕಿಸಾನ್ ಸಂಘದಲ್ಲಿ ಕೆಲಕಾಲ ಗುರುತಿಸಿಕೊಂಡು ರೈತ ಪರ ಕೆಲಸ ಮಾಡಿದ್ದರು. ಈಗ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಅಪೂರ್ವ ಅವಕಾಶ ಅವರಿಗೆ ಸಿಕ್ಕಿದೆ. ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ರೈತರಿಗೆ ಪ್ರೋತ್ಸಾಹ ನೀಡಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಕೊಡಬೇಕು. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರನ್ನು ಮತ್ತೆ ಕೃಷಿಯತ್ತ ಸೆಳೆಯುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

–ಸತ್ಯನಾರಾಯಣ ಉಡುಪ, ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ

***

‘ಕರಾವಳಿ ರೈತರ ಋಣ ತೀರಿಸಿ’

ಕೇಂದ್ರ ಸರ್ಕಾರದ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಇಂತಹ ಹೊತ್ತಿನಲ್ಲಿ ಕರಾವಳಿಯವರಾದ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಿಕ್ಕಿರುವುದು ಸಂತೋಷ. ಈ ಮೂಲಕ ಕೇಂದ್ರ ಸಚಿವೆಯಾಗಲು ಕಾರಣರಾದ ಕರಾವಳಿ ರೈತರ ಋಣ ತೀರಿಸಬೇಕಾದ ಜವಾಬ್ದಾರಿ ಶೋಭಾ ಅವರ ಮೇಲಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರದಿಂದ ಅನುದಾನ ನೀಡಬೇಕು. ರೈತರ ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿಯಾಗಬೇಕು. ಭತ್ತ, ತೆಂಗು, ಅಡಿಕೆ ಹಾಗೂ ಇತರೆ ಬೆಳೆಗಳ ಉತ್ತೇಜನಕ್ಕೆ ಬೆಂಬಲ ಬೆಲೆ ಹೆಚ್ಚಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಕರಾವಳಿಯಲ್ಲಿ ಮಳೆಯ ನೀರು ಹಿಡಿದಿಟ್ಟುಕೊಳ್ಳಲು ನೆರವಾಗುವ ಕಿಂಡಿ ಅಣೆಕಟ್ಟುಗಳನ್ನು ಹೆಚ್ಚಾಗಿ ನಿರ್ಮಿಸಬೇಕು. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಕೊಡಬೇಕು.

–ಯೋಗೀಶ್ ಶೆಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

***

‘ಸಾವಯವ ಕೃಷಿಗೆ ಒತ್ತು ಕೊಡಿ’

ಸರ್ಕಾರದಿಂದ ಸಿಗುವ ಸಬ್ಸಿಡಿಯಿಂದ ರೈತರಿಗೆ ದೀರ್ಘಕಾಲಿನ ಉಪಯೋಗ ಇಲ್ಲ. ಅದರ ಬದಲಿಗೆ, ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗಬೇಕು. ರಾಸಾಯನಿಕ ಗೊಬ್ಬರಕ್ಕೆ ಕೊಡುವ ಸಬ್ಸಿಡಿಯ ಬದಲು ಸಾವಯವ ಕೃಷಿಗೆ ಉತ್ತೇಜನ ಕೊಡಬೇಕು. ದೇಶದಾದ್ಯಂತ ಸಾವಯವ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ತೆರೆದರೆ, ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ. ಜತೆಗೆ ಕರಾವಳಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯಗಳ ಸುತ್ತಲೂ ಬೇಲಿ ಹಾಕುವ ಮೂಲಕ ಬೆಳೆಗಳ ರಕ್ಷಣೆ ಮಾಡಬೇಕು.

–ರಾಮಕೃಷ್ಣ ಶರ್ಮ ಬಂಟಕಲ್ಲು, ಉಡುಪಿ ಕೃಷಿಕ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು