ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಓದಬೇಕು ಕಣ್ರಯ್ಯ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಪಾಠ

Last Updated 6 ನವೆಂಬರ್ 2019, 14:13 IST
ಅಕ್ಷರ ಗಾತ್ರ

ಉಡುಪಿ: ಅಜ್ಜರಕಾಡು ಪುರಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಶಿಕ್ಷಕರಾಗಿ ಪಾಠ ಮಾಡಿದರು. ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತ ಉತ್ತರ ಪಡೆದರು. ತಪ್ಪು ಹೇಳಿದಾಗ ಗದರಿ ಸರಿಪಡಿಸಿದರು.

ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ, ಪಂಚಾಯ್ತಿಗಳಿಗೆ ಮೀಸಲಾತಿ ಕಲ್ಪಿಸಲಾಯಿತು. ಆಗ ಪ್ರಧಾನಿಯಾಗಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಯಾರೂ ಉತ್ತರ ಕೊಡದಿದ್ದಾಗ ನರಸಿಂಹರಾವ್‌ ಕಣ್ರೀ ಎಂದು ಅವರೇ ಉತ್ತರ ನೀಡಿದರು.

ಕರ್ನಾಟಕಕ್ಕೆ ರೇಷ್ಮೆ ಪರಿಚಯಿಸಿದವರು ಯಾರು ? ರಾಕೆಟ್‌ ತಂತ್ರಜ್ಞಾನ ಪರಿಚಯಿಸಿದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೂ ಉತ್ತರ ಬಾರದಿದ್ದಾಗ, ಟಿಪ್ಪು ಸುಲ್ತಾನ್‌, ನೆನಪಿಟ್ಟುಕೊಳ್ಳಿ ಎಂದು ಸೂಚಿಸಿದರು.

ಜನಸಂಘ, ಆರ್‌ಎಸ್‌ಎಸ್‌, ಬಿಜೆಪಿ ಹುಟ್ಟಿದ್ದು ಯಾವಾಗ, ಸ್ಥಾಪಿಸಿದ್ದು ಯಾರು ಎಂದು ಸಾಲು ಸಾಲು ಪ್ರಶ್ನೆ ಹಾಕಿದರು. ಕಾರ್ಯಕರ್ತರು ತಪ್ಪು ಉತ್ತರ ನೀಡಿದಾಗ, ಇಸವಿ ಸಹಿತ ಉತ್ತರ ನೀಡಿ ಇತಿಹಾಸ, ಚರಿತ್ರೆಯನ್ನು ಮೊದಲು ಓದಿ ಎಂದು ಕಿವಿಮಾತು ಹೇಳಿದರು.

ತಪ್ಪು ಉಚ್ಛಾರ:

ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ಎಂದು ಕರೆದರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ, ಕಾರ್ಯಕರ್ತರು, ಸರ್, ರಾಷ್ಟ್ರಪತಿ ಅಲ್ಲ; ರಾಷ್ಟ್ರಪಿತ ಎಂದು ತಿದ್ದಿದರು. ಹೌದು ಎಂದು ಸಿದ್ದರಾಮಯ್ಯ ಸರಿಮಾಡಿಕೊಂಡರು. ಆಗ ನೆರೆದಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.

‘ಟಿಪ್ಪು ಆಗ ವೀರ, ಈಗ ಮತಾಂಧ’

ಪಠ್ಯದಿಂದ ಟಿಪ್ಪು ಸುಲ್ತಾನ್‌ ಇತಿಹಾಸವನ್ನು ತೆಗೆದುಹಾಕಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಟಿಪ್ಪು ಹಾಗೂ ಹೈದರಾಲಿಯ ಹೆಸರಿಲ್ಲದೆ ಮೈಸೂರು ಚರಿತ್ರೆ ಸಂಪೂರ್ಣವಾಗುವುದಿಲ್ಲ. ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪು ವೇಷಧರಿಸಿ ನಾನೇ ಟಿಪ್ಪು ಎಂದು ಸಂಭ್ರಮಿಸಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನ ಶೇಖ್ ಅಲಿ ಅವರು ಬರೆದ ‘ಟಿಪ್ಪು ದ ಕ್ರುಸೇಡರ್’ ಪುಸ್ತಕಕ್ಕೆ ಮುನ್ನುಡಿ ಬರೆದು ಟಿಪ್ಪು ದೇಶಪ್ರೇಮಿ, ದೇಶಭಕ್ತ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಎಂದು ಹೊಗಳಿದ್ದಾರೆ. ಈಗ ಬಿಜೆಪಿ ನಾಯಕರಿಗೆ ಟಿಪ್ಪು ಮತಾಂಧನಾಗಿದ್ದಾನೆ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT