ಸೋಮವಾರ, ಮೇ 16, 2022
27 °C
ಗ್ಯಾರೇಜ್‌ ಮಾಲೀಕರ ವಿರುದ್ಧವೂ ಪ್ರಕರಣ: ಎಸ್‌ಪಿ ವಿಷ್ಣುವರ್ಧನ್ ಎಚ್ಚರಿಕೆ

ಸೈಲೆನ್ಸರ್ ವಿರೂಪಗೊಳಿಸಿದರೆ ವಾಹನ ಸೀಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬೈಕ್‌ ಹಾಗೂ ಕಾರುಗಳ ಸೈಲೆನ್ಸರ್‌ಗಳನ್ನು ವಿರೂಪಗೊಳಿಸಿ ವಿಪರೀತ ಶಬ್ದ ಮಾಲಿನ್ಯ ಮಾಡುತ್ತಿದ್ದ ವಾಹನಗಳ ಸೈಲೆನ್ಸರ್‌ಗಳನ್ನು ಮಣಿಪಾಲ ಪೋಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.

ಬುಧವಾರ ಮಣಿಪಾಲ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ‘ನಗರದಲ್ಲಿ ಸೈಲೆನ್ಸರ್ ವಿರೂಪಗೊಳಿಸಿದ ವಾಹನಗಳಿಂದ ಹೊರಹೊಮ್ಮುತ್ತಿದ್ದ ಕರ್ಕಶ ಶಬ್ಧದಿಂದ ವೃದ್ಧರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ತೊಂದರೆಯಾಗುತ್ತಿರುವ ಕುರಿತು ದೂರುಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಜ.1ರಿಂದ 31ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ 51 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ₹ 25,000ಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಜತೆಗೆ, ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಿಂದ ಹಿಡಿದು ವಾಣಿಜ್ಯ ಉದ್ದೇಶದ ವಾಹನಗಳ ಸೈಲೆನ್ಸರ್‌ ಡಿಸೆಬಲ್‌ ಮಟ್ಟ 80 ರಿಂದ 91ರ ಒಳಗೆ ಇರಬೇಕು ಎಂಬ ನಿಯಮವಿದೆ. ಆದರೆ, ಕೆಲವರು ವಾಹನಗಳಿಗೆ 90ಕ್ಕಿಂತ ಹೆಚ್ಚು ಡಿಸೆಬಲ್‌ ಶಬ್ಧ ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿದ್ದರು. ವಿರೂಪ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಮತ್ತೆ ಮರುಬಳಕೆಯಾಗಬಾರದು ಎಂಬ ಉದ್ದೇಶದಿಂದ ನಾಶಪಡಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಕಾರ್ಯಾಚರಣೆಯ ಮುಂದಿನ ಭಾಗವಾಗಿ ಸೈಲೆ‌ನ್ಸರ್‌ಗಳನ್ನು ವಿರೂಪಗೊಳಿಸುವ ಗ್ಯಾರೇಜ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವುದರ ಜತೆಗೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಾಹನ ಸವಾರರು ಮುಂದೆ ವಿರೂಪ ಸೈಲೆನ್ಸರ್ ಬಳಿಸಿದರೆ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದರು.

ಜ.18ರಿಂದ ಫೆ.17ರವರೆಗೆ ‘ಸಡಕ್‌ ಸುರಕ್ಷಾ ಜೀವನ್‌ ರಕ್ಷಾ’ ಘೋಷಣೆಯೊಂದಿಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಮಾಡಲಾಗುತ್ತಿದೆ. ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಉಡುಪಿ ನಗರ ಡಿವೈಎಸ್‌ಪಿ ಸುಧಾಕರ್‌ ಸದಾನಂದ ನಾಯಕ್‌, ಮಣಿಪಾಲ ಠಾಣೆ ಇನ್‌ಸ್ಪೆಕ್ಟರ್‌ ಎಂ.ಮಂಜುನಾಥ್‌, ಪಿಎಸ್‌ಐ ರಾಜಶೇಖರ್ ವಂದಲಿ, ಸುಧಾಕರ ತೋನ್ಸೆ, ಪಿಎಸ್‌ಐ ನಿರಂಜನ್‌ ಗೌಡ, ದೇವರಾಜ ಬಿರಾದರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು