ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಉಲ್ಬಣ: ಸರಳ ಪರ್ಯಾಯಕ್ಕೆ ನಿರ್ಧಾರ, ದರ್ಬಾರ್ ಕೂಡ ಸರಳ

ಪರ್ಯಾಯೋತ್ಸವ ಸಮಿತಿ ಸಭೆಯಲ್ಲಿ ಘೋಷಣೆ
Last Updated 16 ಜನವರಿ 2022, 16:00 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಆತಂಕಗಳ ಮಧ್ಯೆ ಕೃಷ್ಣಾಪುರ ಮಠದ ಪರ್ಯಾಯ ಉತ್ಸವದ ಆಯೋಜನೆಯ ಬಗ್ಗೆ ಸಾರ್ವಜನಿಕರು ಹಾಗೂ ಭಕ್ತರಲ್ಲಿದ್ದ ಕುತೂಹಲಗಳಿಗೆ ತೆರೆಬಿದ್ದಿದೆ. ಕೋವಿಡ್ ಹಿನ್ನೆಲೆಯಲ್ಲಿ ಉಡುಪಿಯ ಪ್ರಮುಖ ಧಾರ್ಮಿಕ ಉತ್ಸವವಾದ ಪರ್ಯಾಯೋತ್ಸವವನ್ನು ಅತಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ‌ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಅಗತ್ಯವಾಗಿದ್ದು, ಸರ್ಕಾರದ ನಿರ್ಧಾರಕ್ಕೆ ಸಹಕರಿಸಬೇಕು ಎಂಬ ಭಾಬಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥರ ಆಶಯದಂತೆ ಜ.17ರ ನಡುರಾತ್ರಿ ಹಾಗೂ 18ರ ನಸುಕಿನಲ್ಲಿ ನಡೆಯುವ ಪರ್ಯಾಯೋತ್ಸವ ಮೆರವಣಿಗೆ ಹಾಗೂ ರಾಜಾಂಗಣದಲ್ಲಿ ನಡೆಯಲಿರುವ ಪರ್ಯಾಯ ದರ್ಬಾರ್ ಸಭೆಯನ್ನು ತೀರಾ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪರ್ಯಾಯ ಉತ್ಸವವನ್ನು ಟಿವಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಭಕ್ತರು ಪ್ರತ್ಯಕ್ಷವಾಗಿ ಉತ್ಸವದಲ್ಲಿ ಭಾಗವಹಿಸದೆ ಆನ್‌ಲೈನ್‌ ಹಾಗೂ ಮಾಧ್ಯಮಗಳಲ್ಲಿ ವೀಕ್ಷಿಸುವ ಮೂಲಕ ಸಹಕರಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಉತ್ಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ತಂಡಗಳ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಕೆಲವು ಟ್ಯಾಬ್ಲೋಗಳನ್ನು ಕೂಡ ಭಾಗಶಃ ರದ್ದು ಮಾಡಲಾಗಿದೆ. ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆಯನ್ನು ಹೊತ್ತ ವಾಹನಗಳು, ವಾದ್ಯ, ಚಂಡೆ, ಡೋಲು, ಬಿರುದಾವಳಿ ಹಾಗೂ ಪೌರಾಣಿಕ ದೃಶ್ಯಾವಳಿಗಳನ್ನೊಳಗೊಂಡ ಕೆಲವು ಟ್ಯಾಬ್ಲೋಗಳು ಮಾತ್ರ ಮೆರಣಿಗೆಯಲ್ಲಿ ಇರುತ್ತವೆ. ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

ಪರ್ಯಾಯದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್ ಲಸಿಕೆಗಳನ್ನು ಪಡೆದಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಕೊಳ್ಳಬೇಕು. ಸಮಿತಿಯು ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕರಿಸಲಿದ್ದು ಜನತೆಯೂ ಸಹಕರಿಸಬೇಕು ಎಂದು ಶಾಸಕರ ರಘುಪತಿ ಭಟ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT