ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಾಮಾಜಿಕ ಅಸ್ಥಿರತೆ ಬಾಲ್ಯ ವಿವಾಹಕ್ಕೆ ಕಾರಣ’

ನ್ಯಾಯಾಲಯ, ಪೊಲೀಸ್‌ ಠಾಣೆ ಕಾರ್ಯವೈಖರಿ ವೀಕ್ಷಣೆ ಕಾರ್ಯಕ್ರಮ
Published : 27 ಸೆಪ್ಟೆಂಬರ್ 2024, 5:24 IST
Last Updated : 27 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments

ಉಡುಪಿ: ‘ಸಾಮಾಜಿಕ ಅಸ್ಥಿರತೆಯಿಂದಾಗಿ ಇಂದಿಗೂ ಬಾಲ್ಯವಿವಾಹ ಪದ್ಧತಿ ನಮ್ಮ ಸಮಾಜದಲ್ಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್‌ ಎಸ್‌. ಗಂಗಣ್ಣವರ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನದ ಪ್ರಯುಕ್ತ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನ್ಯಾಯಾಲಯ ಹಾಗೂ ಪೊಲೀಸ್‌ ಠಾಣೆ ಕಾರ್ಯವೈಖರಿ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹವು ಸಮಾಜದಲ್ಲಿನ ಆಳವಾದ ಸಮಸ್ಯೆಯನ್ನು ಬಿಂಬಿಸುತ್ತದೆ. ಸಮಾಜದಲ್ಲಿರುವ ಅಸ್ಥಿರತೆಗೋಸ್ಕರ ಬಾಲ್ಯ ವಿವಾಹದ ಅನಿವಾರ್ಯತೆಯನ್ನು ಕಂಡುಕೊಂಡು ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಬಾಲ್ಯವಿವಾಹ ಪದ್ಧತಿ ತೊಡೆದುಹಾಕಲು ಸ್ವಾತಂತ್ರ್ಯಪೂರ್ವದಿಂದಲೂ ಹಲವಾರು ಹೋರಾಟಗಳು ನಡೆದಿವೆಯಾದರೂ, ಅದು ಈಗಲೂ ಕೆಲವೆಡೆ ಚಾಲ್ತಿಯಲ್ಲಿದೆ ಎಂದರೆ ಅದು ಸರಳವಾಗಿ ಬಗೆಹರಿಸಬಹುದಾದ ವಿಚಾರವಲ್ಲ. ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಲಯಗಳು ಮತ್ತು ಪೊಲೀಸ್‌ ಠಾಣೆಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ಬಾಲ್ಯವಿವಾಹ, ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ನ್ಯಾಯಾಧೀಶರ ಜೊತೆ ಸಂವಾದ ನಡೆಸಿದರು.

ಹೆಣ್ಣುಮಕ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ 75 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ವಿದ್ಯಾರ್ಥಿನಿಯರು ನ್ಯಾಯಾಲಯದ ಕಲಾಪ ವೀಕ್ಷಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ಪುರುಷೋತ್ತಮ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಡಿವೈಎಸ್‌ಪಿ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲ ಸಿ.ಕೆ., ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಲೀಲಾಭಾಯಿ ಭಾಗವಹಿಸಿದ್ದರು.

‘ಭವಿಷ್ಯದ ಬಗ್ಗೆ ಚಿಂತನೆ ಮಾಡಿ’

ಹೆಣ್ಣು ಮಕ್ಕಳು ತಮ್ಮ ಅಣ್ಣ ತಮ್ಮಂದಿರನ್ನು ತಿದ್ದಬೇಕು. ಪಾಲಕರು ಗಂಡು ಮಕ್ಕಳನ್ನು ಸಂವೇದನಾಶೀಲರಾಗಿ ಬೆಳೆಸಬೇಕು ಹಾಗಾದರೆ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬಹುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅಭಿಪ್ರಾಯಪಟ್ಟರು. ಹೆಣ್ಣು ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಪಾಲಕರ ಜೊತೆ ಮುಕ್ತವಾಗಿ ಮಾತನಾಡುವ ವಾತಾವರಣ ಸೃಷ್ಟಿಸಬೇಕು. ಹಾಗಿದ್ದರೆ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಯನ್ನು ಇಲ್ಲವಾಗಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT