ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಗ್ರಹನಿಗೆ ಸ್ವಂತಿಕೆ ಇದ್ದರೆ ಯಶಸ್ಸು

‘ಸ್ಪೆಕ್ಟ್ರಮ್’ ಛಾಯಾಚಿತ್ರ ಪ್ರದರ್ಶನದಲ್ಲಿ ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್
Last Updated 28 ಆಗಸ್ಟ್ 2019, 15:20 IST
ಅಕ್ಷರ ಗಾತ್ರ

ಉಡುಪಿ: ವಿಮರ್ಶೆಗಳಿಂದ ಛಾಯಾಚಿತ್ರಕಾರ ಎತ್ತರಕ್ಕೆ ಬೆಳೆಯಬಲ್ಲ; ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಬಲ್ಲ ಎಂದು ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಹಕ ಫೋಕಸ್ ರಾಘು ಅವರ ಛಾಯಾಚಿತ್ರಗಳ ಪ್ರದರ್ಶನ ‘ಸ್ಪೆಕ್ಟ್ರಮ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫೊಟೊಗ್ರಫಿ ಕಾಪಿ ಪೇಸ್ಟ್‌ ಮಾಡುವ ಕಲೆಯಲ್ಲ; ಛಾಯಾಚಿತ್ರಕಾರನಿಗೆ ಸ್ವಂತಿಕೆ ಬಹಳ ಮುಖ್ಯ. ಹೃದಯಕ್ಕೆ ಹತ್ತಿರವಾಗುವಂತಹ ಚಿತ್ರಗಳನ್ನು ಸೆರೆಹಿಡಿದವ ಯಶಸ್ವಿಯಾಗುತ್ತಾನೆ ಎಂದು ಕಿವಿಮಾತು ಹೇಳಿದರು.

ಛಾಯಾಗ್ರಹಕ ಭಾವಗಳನ್ನು ಗ್ರಹಿಸಿದರೆ ಮಾತ್ರ ಉತ್ತಮ ಚಿತ್ರಗಳು ಮೂಡಲು ಸಾಧ್ಯ. ಮುಖ್ಯವಾಗಿ ಛಾಯಾಚಿತ್ರಣವನ್ನು ಅತಿಯಾಗಿ ಪ್ರೀತಿಸುವಂತಿರಬೇಕು ಎಂದರು.

ಮನೋವೈದ್ಯ ಪಿ.ವಿ.ಭಂಡಾರಿ ಮಾತನಾಡಿ, ದುಬಾರಿ ಬೆಲೆಯ ಕ್ಯಾಮೆರಾಗಳಿಂದ ಮಾತ್ರ ಅತ್ಯುತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯಬಹುದು ಎಂಬ ಭಾವನೆ ಎಲ್ಲರಲ್ಲಿದೆ. ಸೂಕ್ಷ್ಮ ಒಳಗಣ್ಣಿನಿಂದ ಅದ್ಭುತ ಚಿತ್ರಗಳನ್ನು ತೆಗೆಯಲು ಸಾಧ್ಯ ಎಂದರು.

ಛಾಯಾಗ್ರಹಕ ದೇಶವನ್ನು ಸುತ್ತಬೇಕು, ಅಪರೂಪದ ಕ್ಷಣಗಳನ್ನು ಸೆರೆಹಿಡಿಯಬೇಕು. ಕನಸು, ಶಿಸ್ತು, ಸಾಧಿಸುವ ಛಲ, ಶ್ರದ್ಧೆ ಹಾಗೂ ಅದೃಷ್ಟ ಇದ್ದರೆ ಛಾಯಾಗ್ರಹಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ವಿಜಯ್ ಮಾತನಾಡಿ, ಸಮಯವನ್ನು ಯಾರಿಂದಲೂ ಹಿಡಿದಿಡಲು ಸಾಧ್ಯವಿಲ್ಲ. ಆದರೆ, ಭಾವನಾತ್ಮಕ ಸನ್ನಿವೇಶಗಳು, ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಫೊಟೊಗಳಲ್ಲಿ ಸೆರೆಹಿಡಿದಿಟ್ಟು, ಸುಧೀರ್ಘ ಕಾಲದವರೆಗೂ ಸಂತೋಷ ಅನುಭವಿಸಬಹುದು ಎಂದರು.

ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಮಾತನಾಡಿ, ಇಲ್ಲಿನ ಉದ್ಯಮಿಗಳು ಸ್ಥಳೀಯ ಛಾಯಾಚಿತ್ರಕಾರರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ತುಳುನಾಡಿನ ಶ್ರೀಮಂತಿಕೆಯನ್ನು ಬಿಂಬಿಸುವ ಚಿತ್ರಗಳನ್ನು ಕಚೇರಿಗಳಲ್ಲಿ ಪ್ರದರ್ಶಿಸುವ ಮೂಲಕ ಛಾಯಾಚಿತ್ರಕಾರರ ನೆರವಿಗೆ ಬರಬೇಕು ಎಂದರು.

ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲು ಉಡುಪಿಯಲ್ಲಿ ಸುಸಜ್ಜಿತ ಸಾರ್ವಜನಿಕ ಗ್ಯಾಲರಿ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ ಎಂದರು.

ಫೋಕಸ್ ರಾಘು ಅವರ ತಾಯಿ ರತ್ನಾವತಿ ಫೋಟೊ ಪ್ರದರ್ಶನವನ್ನು ಉದ್ಘಾಟಿಸಿದರು. ಸೆ.1ರವರೆಗೆ ಪ್ರದರ್ಶನ ಇರಲಿದೆ.

ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ಎಂಡಿ ಡಾ.ಎಂ.ಹರಿಶ್ಚಂದ್ರ, ನಿಕಾನ್ ಸಂಸ್ಥೆಯ ಆರ್‌ಎಸ್‌ಎಂ ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT