ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ: ದೇವರ ದರ್ಶನ ಪಡೆದ ಸಚಿವ ಕೋಟ

ಕುಂದಾಪುರ: ಪಾರದರ್ಶಕ ವ್ಯವಸ್ಥೆಗೆ ಕಣ್ಗಾವಲು ಸಮಿತಿ- ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ‘ವಿದ್ಯಾರ್ಥಿ ನಿಲಯಗಳ ಆಡಳಿತ ವ್ಯವಸ್ಥೆ, ಟೆಂಡರ್ ಪ್ರಕ್ರಿಯೆ, ಆಹಾರ ವಸ್ತುಗಳ ಸರಬರಾಜು ವ್ಯವಸ್ಥೆಗಳಲ್ಲಿ ಪಾರದರ್ಶಕತೆ ತರಲು ಜಿಲ್ಲಾ ಮಟ್ಟದಲ್ಲಿ ಕಣ್ಗಾವಲು ಸಮಿತಿ ರಚಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 ಕುಂದಾಪುರ ಸಮೀಪದ ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಮಂಗಳವಾರ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಭ್ರಷ್ಟಾಚಾರ ಮುಕ್ತ, ಮಧ್ಯವರ್ತಿಗಳ ಹಂಗಿಲ್ಲದೆ ವಿದ್ಯಾರ್ಥಿ ನಿಲಯಗಳು ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಕಣ್ಗಾವಲು ಸಮಿತಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಲಾಗುವುದು. ಹೊಸದಾಗಿ ರಚನೆಯಾಗಿರುವ ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ  24 ಇಲಾಖೆಗಳ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಲು ಅಗತ್ಯವಾಗಿರುವ ಕ್ರಮಗಳ ಕುರಿತು ಈಗಾಗಲೇ ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ಸಮಸ್ಯೆ ಆದಷ್ಟು ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ವಾಸಿಸುತ್ತಿರುವ ನಿವೇಶನಗಳಿಗೆ ಹಕ್ಕುಪತ್ರ ನೀಡುವ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

 ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಕೇಂದ್ರಗಳನ್ನು ಸೇರಿ ಪ್ರತಿಯೊಂದು ವಿಭಾಗವನ್ನು ಸಕ್ರಿಯವಾ ಗಿರುವಂತೆ ಹಾಗೂ ಸಾರ್ವಜನಿಕರಿಗೆ ಅನೂಕೂಲ ವಾಗಿರುವಂತೆ ಕಾರ್ಯನಿರ್ವಹಣೆ ಮಾಡಲು ಸೂಚನೆ ನೀಡಲಾಗುವುದು ಎಂದರು.

ಜನರಿಗೆ ಉಪಯೋಗಕ್ಕೆ ಇಲ್ಲದ, ವೆಚ್ಚದಾಯಕ ಯೋಜನೆಗಳನ್ನು ರದ್ದು ಪಡಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮಕ್ಕಳ ಉನ್ನತ, ವಿದೇಶ ವ್ಯಾಸಂಗ ಹಾಗೂ ಸ್ಥಳೀಯವಾಗಿ ವಿದ್ಯಾಭ್ಯಾಸಕ್ಕೆ ಅಗತ್ಯವಾಗಿರುವ ಸೌಲಭ್ಯಗಳನ್ನು ಯೋಜನಾ ಬದ್ಧವಾಗಿ, ಕೊರತೆಯಾಗದಂತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಚಿವರ ಅಪ್ತ ಸಹಾಯಕ ಹರೀಶ್ ಶೆಟ್ಟಿ, ಅರ್ಚಕ ವೆಂಕಟನಾರಾಯಣ, ವ್ಯವಸ್ಥಾಪಕ ನಟೇಶ್ ಕಾರಂತ್, ಬಿಜೆಪಿ ಕುಂಭಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಕಾಮತ್, ಹೈನುಗಾರಿಕೆ ಪ್ರಕೋಷ್ಠ ಸಹ ಸಂಚಾಲಕ ಮಹೇಶ್ ಶೆಣೈ, ಕುಂಭಾಸಿ ಗ್ರಾಮ ಪಂಚಾಯಿತಿ ಸದಸ್ಯ ಕಮಲಾಕ್ಷ ಪೈ, ಮಹಾಬಲ ಆಚಾರ್, ಕುಂದಾಪುರ ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ ಇದ್ದರು.

‘ಮನೆ ನಿರ್ಮಾಣಕ್ಕೆ₹ 5 ಲಕ್ಷದ ಪ್ರಸ್ತಾವ’

ಕುಂದಾಪುರ: ಸಮಾಜದ ಪ್ರತಿಯೊಬ್ಬರಿಗೂ ಬದುಕಲು ಬೇಕಾದ ಮೂಲ ಸೌಲಭ್ಯ ಒದಗಿಸುವುದು ಹಾಗೂ ಆಹಾರ, ಶಿಕ್ಷಣ, ಆರೋಗ್ಯ ಹಾಗೂ ಸೂರು ಒದಗಿಸಬೇಕು ಎಂಬುದು ಬಿಜೆಪಿ ಚಿಂತನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಇಲ್ಲಿನ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಪಕ್ಷದ ವತಿಯಿಂದ ನೀಡಲಾದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಈಗ ಇರುವ ₹ 1.70 ಲಕ್ಷ ಅನುದಾನದಲ್ಲಿ ಉತ್ತಮ ಮನೆ ನಿರ್ಮಾಣ ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮನೆಗಳ ನಿರ್ಮಾಣಕ್ಕಾಗಿ ನೀಡುವ ಅನುದಾನವನ್ನು ₹ 5 ಲಕ್ಷಕ್ಕೆ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಾಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಜನಪರ ಯೋಜನೆಗಳನ್ನು ಹೊಂದಿರುವ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಮಾಜದ ಶೋಷಿತ ಹಾಗೂ ಬಡ ವರ್ಗದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದರು.

ಆರ್ಥಿಕ ಸಂಪನ್ಮೂಲಗಳ ಸಮತೋಲನಕ್ಕಾಗಿ ಒಂದು ವರ್ಷಗಳ ಕಾಲ ಆರ್ಥಿಕ ವೆಚ್ಚವನ್ನು ನಿಯಂತ್ರಣದಲ್ಲಿ ಇರಿಸುವ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಇರುವ ಅಂದಾಜು 25 ಲಕ್ಷ ಪರಿಶಿಷ್ಟ ಕುಟುಂಬಗಳ ಸರ್ವೆ ನಡೆಸಿ ಮನೆ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಪರಿಶಿಷ್ಟ ಸಮಾಜ ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ಉಪಾಧ್ಯಕ್ಷ ಕಿರಣಕುಮಾರ ಕೊಡ್ಗಿ ಅವರು ಸಚಿವ ಕೋಟ ಅವರನ್ನು ಗೌರವಿಸಿದರು. ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕಿಶೋರ್ ಕುಮಾರ್, ದಕ್ಷುಣ ಕನ್ನಡ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮೀನುಗಾರಿಕಾ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೋರು, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಕಳಂಜೆ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಜಿಲ್ಲಾ ಪಂಚಾಯಿತ ಮಾಜಿ ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ, ಪುಷ್ಪಾ ಶೇಟ್ ಇದ್ದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿದರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ನಿರೂಪಿಸಿದರು.

ಸಚಿವ ಕೋಟಗೆ ಗೌರವ

ಪತ್ನಿ ಶಾಂತಾ ಹಾಗೂ ಪುತ್ರಿ ಶ್ರುತಿ ಜತೆಗೆ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ ಬಂದಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇಗುಲದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ದೇಗುಲದ ವತಿಯಿಂದ ಅವರನ್ನು ಗೌರವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು