ಸೋಮವಾರ, ಮೇ 17, 2021
28 °C

ರಸ್ತೆಗುಂಡಿ ಮುಚ್ಚಲು ಶೀಘ್ರವೇ ಕ್ರಮಕೈಗೊಳ್ಳಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲೆಯ ನೆರೆ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ದುರಸ್ತಿ ಕಾರ್ಯಕ್ಕೆ ಅಗತ್ಯವಿರುವ ಅನುದಾನದ ಬಿಡುಗಡೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕರಿಗಳಿಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಗೆ ಈಗಾಗಲೇ 10.85 ಕೋಟಿ ಅನುದಾನ ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಿ ಸಂಬಂದಪಟ್ಟ ಇಲಾಖೆಗಳಿಗೆ ವಿತರಿಸಬೇಕು. ಹಾಗೆಯೇ ವಿಕೋಪದಿಂದ ಸಂಪೂರ್ಣ ಹಾನಿಯಾದ ಮನೆಗಳ ಜಿಪಿಎಸ್‌ ಮಾಡಿಸಿ, ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಉಡುಪಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸುರಕ್ಷಿತ ಸೈಕಲ್‌ ಸ್ನೇಹಿ ಝೋನ್‌ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾಧಿಕರಿಗಳು, ಎಸ್ಪಿ, ಆರ್‌ಟಿಒ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಸಮುದಾಯ ನೀರಾವರಿ ಯೋಜನೆಯ ಅನುಷ್ಠಾನ ಕುರಿತಂತೆ ತೋಟಗಾರಿಕೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪಿಎಂ ಕಿಸಾನ್‌ ಯೋಜನೆಯಲ್ಲಿ ರೈತರ ನೊಂದಣಿ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಡಿ ಒಟ್ಟು 6 ಜೀವಹಾನಿ, ಮನೆ ಹಾನಿ, ಬೆಳೆ ಹಾನಿ ಸೇರಿದಂತೆ ಒಟ್ಟು 1367 ಪ್ರಕರಣಗಳಲ್ಲಿ 2,43,31,534 ರೂಪಾಯಿ ಅಂದಾಜು ನಷ್ಟ ಸಂಭವಿಸಿದೆ. 1343 ಪ್ರಕರಣಗಳಿಗೆ ಪರಿಹಾರವಾಗಿ 1,63,32,050 ರೂಪಾಯಿ ಪರಿಹಾರ ವಿತರಿಸಲಾಗಿದೆ. ರಸ್ತೆ, ಸೇತುವೆ ಮತ್ತು ಕಟ್ಟಡಗಳಿಗೆ ಅಂದಾಜು 64235.89 ಲಕ್ಷ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್‌, ಎಸ್ಪಿ ನಿಶಾ ಜೇಮ್ಸ್‌, ಡಿಎಫ್‌ಓ ಕಮಲ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು