ಗುರುವಾರ , ಆಗಸ್ಟ್ 11, 2022
27 °C
ಯಾಂತ್ರೀಕೃತ ಭತ್ತ ಬೇಸಾಯಕ್ಕೆ ಡಾ.ವೀರೇಂದ್ರ ಹೆಗ್ಗಡೆ ಚಾಲನೆ

ರೈತ ಮಕ್ಕಳಿಗೆ ಕೃಷಿ ಕಾಯಕ ಕಲಿಸಿ: ಡಾ.ವೀರೇಂದ್ರ ಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾರ್ಕೂರು(ಬ್ರಹ್ಮಾವರ): ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಾಕಷ್ಟು ಜನ ಇದ್ದು, ಮನೆ ಮಂದಿಯೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇರುವ ಎರಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಊರಿನಿಂದ ಹೊರಗೆ ಕಳುಹಿಸುತ್ತಿರುವುದರಿಂದ ಕೃಷಿ ಭೂಮಿಗಳಿದ್ದರೂ ಕೃಷಿಕರಿಲ್ಲದ ಪರಿಸ್ಥಿತಿ ಎದುರಾಗಿದೆ. ಹೆತ್ತವರು ಮಕ್ಕಳಿಗೆ ಕೃಷಿಭೂಮಿಯಲ್ಲಿ ಕೆಲಸ ಮಾಡುವುದನ್ನು ಕಲಿಸಿಕೊಟ್ಟಲ್ಲಿ ಮಾತ್ರ ನಮ್ಮ ಕೃಷಿ ಉಳಿಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು ಕೂಡ್ಲಿಯಲ್ಲಿ 20ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ(ಯಂತ್ರಶ್ರೀ), ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು.

ಶ್ರಮ ಪಡುವವರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡಬೇಕು. ಗ್ರಾಮೀಣಾಭಿವೃದ್ಧಿ ಯೋಜನೆಗಳು ಪ್ರೇರಣೆ ಮಾಡುವ ಕೆಲಸವನ್ನು ಮಾಡುವುದರೊಂದಿಗೆ ಆಸಕ್ತರಿಗೆ ಅಗತ್ಯವಿರುವ ಬೆಂಬಲವನ್ನು ನೀಡುತ್ತಿದೆ ಎಂದರು. 

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಇ-ಶ್ರಮ್‌, ಫಸಲ್‌ ಬೀಮಾ ಯೋಜನೆಗಳು ರೈತರಿಗೆ ಶಕ್ತಿ ನೀಡುತ್ತಿವೆ. ಆದರೆ ಈ ಯೋಜನೆಗಳ ಸದುಪಯೋಗಕ್ಕೆ ಸಾರ್ವಜನಿಕರು ಮುಂದೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಯಂತ್ರಶ್ರೀ ಯೋಜನೆ ಮತ್ತು ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ‘ಕೇಂದ್ರ ಸರ್ಕಾರ 10ಸಾವಿರ ಎಫ್‌ಪಿಯುಗಳನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇದರಲ್ಲಿ ಸಣ್ಣ ಸಣ್ಣ ರೈತರು ಎಫ್‌ಪಿಯು ರಚಿಸಿಕೊಂಡು, ಸಂಘಟಿತರಾಗಿ ಕೃಷಿ ಉತ್ಪಾದನೆ, ಮಾರುಕಟ್ಟೆ ಒದಗಿಸುವುದು ಗುರಿಯಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಈ ಎಫ್‌ಪಿಯುಗಳು ಸಹಕಾರಿಯಾಗಲಿದೆ. ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ಹಡಿಲು ಭೂಮಿಯಲ್ಲಿ ಕೃಷಿಯಾಗಬೇಕು. ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗಬೇಕು. ತೆಂಗು ಬೆಳೆಗೆ ವಿಶ್ವದಾದ್ಯಂತ ಭಾರಿ ಬೇಡಿಕೆ ಇದೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ತೆಂಗು ಬೆಳೆಗೆ ಸೂಕ್ತ ಮಾರುಕಟ್ಟೆ ಇದ್ದರೂ ಸರಿಯಾದ ರೀತಿಯಲ್ಲಿ ರೈತರಿಗೆ ಲಾಭ ಸಿಗುತ್ತಿಲ್ಲ. ಎಫ್‌ಪಿಯುಗಳನ್ನು ನಿರ್ಮಾಣ ಮಾಡಿ ತೆಂಗು ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಬಹುದು ಎಂದರು.

ಇದೇ ಸಂದರ್ಭ ರೈತರಿಗೆ ನರ್ಸರಿ ಟ್ರೇ ವಿರತಣೆ, ಹಡಿಲು ಭೂಮಿ ಅಭಿವೃದ್ಧಿ ಪಡಿಸಿದ ರೈತರಿಗೆ ಸನ್ಮಾನ, ಯಂತ್ರಶ್ರೀ ಮಾಹಿತಿ ಪತ್ರ ಬಿಡುಗಡೆ, ಬೈಂದೂರು ಭತ್ತ ಬೆಳೆಗಾರರ ಒಕ್ಕೂಟಕ್ಕೆ ಅನುದಾನ ಪತ್ರ ವಿತರಣೆ, ಭತ್ತ ನರ್ಸರಿ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್‌, ವಿನಯ ಕುಮಾರ್‌ ಸೊರಕೆ, ಜಂಟಿ ಕೃಷಿ ನಿರ್ದೇಶಕ ಕೆಂಪೆಗೌಡ, ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ದೇವಾಡಿಗ, ಅಪ್ಪಣ್ಣ ಹೆಗ್ಡೆ, ಕೃಷಿಕ ಬಿ.ಶಾಂತರಾಮ್‌ ಶೆಟ್ಟಿ, ಕೂಡ್ಲಿ ಜನಾರ್ಧನ ದೇವಸ್ಥಾನದ ಆಡಳಿತ ಮೋಕ್ತೆಸರ ವೆಂಕಟರಮಣ ಉಡುಪ, ಉದ್ಯಮಿಗಳಾದ ಆನಂದ್‌ ಸಿ. ಕುಂದರ್‌, ಶ್ರೀನಿವಾಸ ಶೆಟ್ಟಿಗಾರ್‌ ಇದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಸಿಇಓ ಡಾ.ಎಲ್‌ ಎಚ್‌ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಿನೇಶ್‌ ಶೇರೇಗಾರ್‌ ವಂದಿಸಿದರು. ಸುಧೀರ್‌ ಜೈನ್‌, ದಿನೇಶ್‌ ಸಿ. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು