ಉಡುಪಿ: ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ, ಒಳಗೆ ಯಕ್ಷ ಪರಿಕರಗಳಿಂದ ಅಲಂಕಾರಗೊಂಡ ವೇದಿಕೆಯಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರು ಎಳೆ ಎಳೆಯಾಗಿ ತಮ್ಮ ಬದುಕಿನ ಪುಟಗಳನ್ನು ತೆರೆದಿಡುತ್ತಿದ್ದರು. ನಡು ನಡುವೆ ಶಿಷ್ಯರಿಂದ ಪ್ರಶ್ನೆ. ಅದಕ್ಕೆ ಗುರುಗಳ ಉತ್ತರ. ಅಭಿಮಾನಿಗಳ ಕರತಾಡನ...
ನಗರದ ಬುಡ್ನಾರುವಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಜೀವ –70 ಗುರು–ಶಿಷ್ಯರ ಸಂವಾದ ಕಾರ್ಯಕ್ರಮದಲ್ಲಿ ಇಂತಹ ಸನ್ನಿವೇಶಗಳು ಮೂಡಿ ಬಂದವು.
ಗುರುಗಳೇ ನಿಮಗೆ ಎಷ್ಟು ಮಂದಿ ಶಿಷ್ಯರಿದ್ದಾರೆ? ಲೆಕ್ಕವಿದೆಯೇ ಎಂದು ಶಿಷ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜೀವ ಸುವರ್ಣರು, ನಾನು ಕೂಡ ಇನ್ನೂ ಶಿಷ್ಯನಿದ್ಧೇನೆ ಕಲೆಯಿಂದ ಕಲಿಯುವುದು ಬಹಳವಿದೆ ಎಂದು ವಿನೀತವಾಗಿ ಉತ್ತರ ಕೊಟ್ಟರು.
ಮುಂದುವರಿಸಿ, ನನಗೆ ಎಷ್ಟು ಮಂದಿ ಶಿಷ್ಯರಿದ್ದಾರೆ ಎಂಬುದು ನೆನಪಿಲ್ಲ. ಕೇಳಿದವರಿಗೆ ಸಾವಿರ ಎನ್ನುತ್ತೇನೆ. ಸಿಂಗಪುರ ಸೇರಿದಂತೆ ಹಲವು ದೇಶಗಳಲ್ಲಿ ಶಿಷ್ಯರಿದ್ದಾರೆ. ಅಲ್ಲದೆ ವಾರಾಣಸಿ, ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಶಿಷ್ಯರಿದ್ದಾರೆ. ಅವರಲ್ಲಿ ಹಲವರು ಈಗಲೂ ಸಂಪರ್ಕದಲ್ಲಿದ್ದಾರೆ ಎಂದರು.
ಯಕ್ಷಗಾನದ ಮೂಲಕ ತಾವು ಬದುಕು ಕಟ್ಟಿಕೊಂಡಿದ್ದನ್ನು ವಿವರಿಸಿದ ಸುವರ್ಣರು, ಬಾಲ್ಯದ ಕಷ್ಟದ ದಿನಗಳನ್ನೂ ನೆನಪಿಸಿಕೊಂಡರು. ಶಿವರಾಮ ಕಾರಂತ, ಬಿ.ವಿ. ಕಾರಂತ ಅವರ ಪರಿಚಯವಾದ ಮೇಲೆಯೇ ನಾನು ಇಡೀ ದೇಶವನ್ನು ಕಣ್ಣುಬಿಟ್ಟು ನೋಡಲು ಸಾಧ್ಯವಾಯಿತು ಎಂದೂ ಹೇಳಿದರು.
ಗುರು ಶಿಷ್ಯರ ನಡುವಿನ ಇಂತಹ ಆತ್ಮೀಯ ಸಂವಾದಕ್ಕೆ ಇಡೀ ಕಾರ್ಯಕ್ರಮ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕರಾವಳಿಯ ಕಲೆಯಾದ ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಸಂಜೀವ ಸುವರ್ಣರ ಕೊಡುಗೆ ಅಪಾರ ಎಂದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಡಾ. ಭಾಸ್ಕರಾನಂದ ಕುಮಾರ್, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.