ಗುರುವಾರ , ಮಾರ್ಚ್ 23, 2023
30 °C
ಕೃಷ್ಣಮಠ ಸದ್ಯ ತೆರೆಯುವುದಿಲ್ಲ, ವಾರದ ಬಳಿಕ ನಿರ್ಧಾರ; ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 5ರಿಂದ ಜಾರಿಗೆ ಬರುವಂತೆ ಮತ್ತಷ್ಟು ನಿರ್ಬಂಧಗಳನ್ನು ಸಡಿಲಿಸಿದೆ.

ದೇವಸ್ಥಾನಗಳ ತೆರೆಯಲು ಅನುಮತಿ: ಕೋವಿಡ್‌ ಎರಡನೇ ಅಲೆಯ ತೀವ್ರತೆಯ ಕಾರಣ 2 ತಿಂಗಳಿಗೂ ಹೆಚ್ಚು ಕಾಲ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗಿತ್ತು. ಉಡುಪಿಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನ, ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಗಳು ಭಣಗುಡುತ್ತಿದ್ದವು.

ದೇವರಿಗೆ ಸೀಮಿತ ಸೇವೆಗಳು ಮಾತ್ರ ನಡೆಯುತ್ತಿದ್ದವು. ದೇವರ ದರ್ಶನ, ವಿಶೇಷ ಪೂಜೆ, ಹೋಮ, ಹವನಗಳಲ್ಲಿ ಭಾಗಿಯಾಗಲು ಭಕ್ತರಿಗೆ ಅವಕಾಶ ಇರಲಿಲ್ಲ. ಸೋಂಕು ಕಡಿಮೆಯಾಗುತ್ತಿದ್ದಂತೆ ದೇವಸ್ಥಾನಗಳ ಬಾಗಿಲು ತೆರೆಯಲು ಭಕ್ತರ ಒತ್ತಡ ಹೆಚ್ಚಾಗಿದ್ದರಿಂದ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಸೀಮಿತ ಸೇವೆಗಳಿಗೆ ಅನುಮತಿ ನೀಡಿದೆ.

ಕೋವಿಡ್ ಮಾರ್ಗಸೂಚಿಯನ್ವಯ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶಕ್ಕೆ ಅನುಮತಿ ನೀಡಿರುವುದರ ಜತೆಗೆ ದೇವರ ದರ್ಶನ ಹಾಗೂ ಆರತಿ ಸೇವೆಗೆ ಅವಕಾಶ ನೀಡಲಾಗಿದೆ. ಸೋಮವಾರದಿಂದ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತರಿಗೆ ಮುಕ್ತವಾಗಲಿವೆ.

ವಾರದ ಬಳಿಕ ನಿರ್ಧಾರ: ಅದಮಾರು ಸ್ವಾಮೀಜಿ
ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸರ್ಕಾರ ಅವಕಾಶ ನೀಡಿದ್ದು, ಕೃಷ್ಣಮಠಕ್ಕೆ ಸದ್ಯ ಭಕ್ತರ ಪ್ರವೇಶಕ್ಕೆ ಅನುಮತಿ ಇಲ್ಲ. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಜತೆಗೆ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕೈಗಾರಿಕೆಗಳಲ್ಲಿ ಶೇ 100 ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಬಹುದು. ಮಾಲ್‌ಗಳನ್ನು ತೆರೆಯಬಹುದು. ಬಸ್‌ಗಳಲ್ಲಿ ಶೇ 100ರಷ್ಟು ಪ್ರಯಾಣಿಕರು ಸಂಚರಿಸಲು ಅನುಮತಿ ನೀಡಲಾಗಿದೆ. ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ 100 ಜನರು ಭಾಗವಹಿಸಲು ಅವಕಾಶ ಇದೆ. ಅಂತ್ಯ ಸಂಸ್ಕಾರದಲ್ಲಿ 20 ಜನ ಭಾಗವಹಿಸಬಹುದು. ಈಜುಕೊಳಗಳಲ್ಲಿ ಅಭ್ಯಾಸ ಮಾಡಬಹುದು. ಕ್ರೀಡಾ ಸಂಕೀರ್ಣಗಳು ಅಭ್ಯಾಸಕ್ಕೆ ತೆರೆದುಕೊಳ್ಳಲಿವೆ. ವಾರಾಂತ್ಯದ ಕೊರೊನಾ ಕರ್ಫ್ಯೂ ಬದಲಾಗಿ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ, ಇತರೆ ಸಮಾರಂಭಗಳ ಆಯೋಜನೆಗೆ ಅವಕಾಶ ನೀಡಲಾಗಿಲ್ಲ. ಪಬ್‌ಗಳು ತೆರೆಯುವಂತಿಲ್ಲ, ಬಾರ್‌ಗಳು ತೆರೆಯಬಹುದು. ಚಿತ್ರಮಂದಿರಗಳು ತೆರೆಯುವಂತಿಲ್ಲ. ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಆಯಾ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು