ಶನಿವಾರ, ಫೆಬ್ರವರಿ 4, 2023
28 °C
ಹೆಜಮಾಡಿ: ಡಿ.1ರಿಂದ ಪರಿಷ್ಕೃತ ಟೋಲ್ ದರ ಜಾರಿ ಅನುಮಾನ

ಟೋಲ್‌ ಬರೆ: ಹೆಚ್ಚಿದ ಜನಾಕ್ರೋಶ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸುರತ್ಕಲ್‌ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿ.1ರಿಂದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ಟೋಲ್ ಶುಲ್ಕ ಸಂಗ್ರಹಿಸುವುದಾಗಿ ಈಚೆಗೆ ಆದೇಶ ಹೊರಡಿಸಿದೆ. ಆದರೆ, ಈ ಆದೇಶ ಜಾರಿಗೆ ತಾಂತ್ರಿಕ ಕಾರಣಗಳು ಅಡ್ಡಿಯಾಗಿದ್ದು, ಡಿ.1ರಿಂದ ಪರಿಷ್ಕೃತ ದರ ಜಾರಿಯಾಗುವುದು ಬಹುತೇಕ ಕಷ್ಟಸಾಧ್ಯ ಎನ್ನಲಾಗಿದೆ.

ಹೆಜಮಾಡಿ ಟೋಲ್ ಕೇಂದ್ರದಲ್ಲಿ ಪರಿಷ್ಕೃತ ಟೋಲ್ ದರವನ್ನು ಸಂಗ್ರಹಿಸಲು ಅಗತ್ಯವಾದ ತಾಂತ್ರಿಕ ವ್ಯವಸ್ಥೆ ಅಳವಡಿಕೆಯಾಗಿಲ್ಲ. ಹಾಗಾಗಿ ಡಿ.1ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆಗಳು ಕಡಿಮೆ. ಹೊಸ ದರ ಜಾರಿಗೆ ಒಂದು ವಾರ ಸಮಯಾವಕಾಶ ಬೇಕಾಗಬಹುದು ಎಂದು ನವಯುಗ ಟೋಲ್‌ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನಾಕ್ರೋಶ:

ಹೆಜಮಾಡಿ ಟೋಲ್ ಕೇಂದ್ರದಲ್ಲಿ ದುಪ್ಪಟ್ಟು ಟೋಲ್ ಶುಲ್ಕ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ಜಿಲ್ಲೆಯಾದ್ಯಂತ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಡಿ.1ರಿಂದ ಹೆಚ್ಚುವರಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಡಿ.2ರಿಂದಲೇ ಅನಿರ್ಧಿಷ್ಟವಾಧಿ ಧರಣಿ ಸತ್ಯಾಗ್ರಹ ನಡೆಸಲು ಹಲವು ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.

ಸುರತ್ಕಲ್‌ ಟೋಲ್‌ ತೆರವು ಹೋರಾಟದ ಮುಂಚೂಣಿಯಲ್ಲಿದ್ದ ಟೋಲ್‌ ವಿರೋಧಿ ಹೋರಾಟ ಸಮಿತಿ ಹೆಜಮಾಡಿಯಲ್ಲೂ ಪ್ರತಿಭಟನೆಗಿಳಿಯಲು ಸಜ್ಜಾಗಿದೆ. ಜತೆಗೆ ಕಾಂಗ್ರೆಸ್‌, ಸಿಪಿಐಎಂ, ಟ್ಯಾಕ್ಸಿ ಯೂನಿಯನ್‌, ರೈತ ಸಂಘ, ದಲಿತ ಸಂಘಟನೆಗಳು, ಸಂಘ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಾರ್ವಜನಿಕರು ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಸುರತ್ಕಲ್‌ ಟೋಲ್ ಹೋರಾಟ ನ.30ರಂದು ಕೊನೆಗೊಳ್ಳಲಿದ್ದು, ಡಿ.1ರಿಂದ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹಿಸಿದರೆ ಡಿ.2ರಿಂದ ಪ್ರತಿಭಟನೆಗೆ ಚಾಲನೆ ನೀಡುವುದಾಗಿ ಸಮಿತಿಯ ಪ್ರಧಾನ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಬೆಂಬಲ:

ಡಿ.2ರಂದು ಹೆಜಮಾಡಿ ಟೋಲ್ ಗೇಟ್ ಬಳಿ ನಡೆಯುವ ಧರಣಿ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ. ಕಾಂಗ್ರೆಸ್ ಮುಖಂಡರು, ಬ್ಲಾಕ್ ಪದಾಧಿಕಾರಿಗಳು, ಮುಂಚೂಣಿ ಘಟಕ, ಸಮಿತಿ, ಗ್ರಾಮೀಣ ಕಾಂಗ್ರೆಸ್, ಹಾಗೂ ಬೂತ್ ಸಮಿತಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

ಸಿಪಿಐಎಂ ಬೆಂಬಲ:

ಸುದೀರ್ಘ ಹೋರಾಟದ ಫಲವಾಗಿ ಸುರತ್ಕಲ್ ಟೋಲ್ ಗೇಟ್ ಮುಚ್ಚಿರುವ ನಿರ್ಧಾರ ಸ್ವಾಗತಾರ್ಹ. ಆದರೆ, ಆದರೆ ಸುರತ್ಕಲ್ ಟೋಲ್‌ ಶುಲ್ಕವನ್ನು ಹೆಜಮಾಡಿ ಟೋಲ್‌ಗೆ ವರ್ಗಾಯಿಸಿರುವುದು ಖಂಡನೀಯ.

ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳ ಅಕ್ಷಮ್ಯ ಹಾಗೂ ಲೂಟಿಕೋರ ಕಂಪನಿಯ ಜೊತೆಗಿನ ಸರ್ಕಾರದ ಶಾಮೀಲಿಗೆ ನಿದರ್ಶನವಾಗಿದ್ದು, ಹೆಜಮಾಡಿಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಹೋರಾಟಕ್ಕೆ ಸಿಪಿಐ(ಎಂ) ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ
ತಿಳಿಸಿದ್ದಾರೆ.

ಸಂಚಾರಕ್ಕೆ ಅಡ್ಡಿಪಡಿಸಿದರೆ ಕ್ರಮ: ಎಸ್‌ಪಿ

ಹೆಜಮಾಡಿ ಟೋಲ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಪೊಲೀಸ್ ಇಲಾಖೆ ಅಡ್ಡಿಪಡಿಸುವುದಿಲ್ಲ. ವಾಹನಗಳನ್ನು ಅಡ್ಡಹಾಕಿ ಸಂಚಾರಕ್ಕೆ ಅಡ್ಡಿಪಡಿಸಿದರೆ, ಸಾರ್ವಜನಿಕರ ಆಸ್ತಿ ನಾಶಪಡಿಸಿದರೆ, ಕಾನೂನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೆಜಮಾಡಿ ಟೋಲ್ ಕೇಂದ್ರದ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

–ಹಾಕೆ ಅಕ್ಷಯ್ ಮಚ್ಚಿಂದ್ರ, ಎಸ್‌ಪಿ

ಹೆಜಮಾಡಿ ಟೋಲ್‌ ಕೇಂದ್ರದ ಬಳಿ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಟೋಲ್ ಹೆಚ್ಚಳ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
–ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

‘ಟೋಲ್ ದರ ಹೆಚ್ಚಾದರೆ ಬಿಜೆಪಿಯೇ ಹೊಣೆ’

ಟೋಲ್ ದರ ಹೆಚ್ಚಳ ಸಂಬಂಧ ನಡೆದ ಮಹತ್ವದ ಸಭೆಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳ ಶಾಸಕರು, ಸಂಸದರು, ಸಚಿವರು ಭಾಗವಹಿಸಿಲ್ಲ. ಪರಿಣಾಮ ಹೆಜಮಾಡಿಯಲ್ಲಿ ದುಪ್ಪಟ್ಟು ಟೋಲ್‌ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇದಕ್ಕೆ ಬಿಜೆಪಿಯೇ ನೇರ ಹೊಣೆ. ಹಿಂದಿನ ಸಭೆಗಳಲ್ಲಿ ಭಾಗವಹಿಸಿ ದುಪ್ಪಟ್ಟು ಟೋಲ್ ಸಂಗ್ರಹ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಕರಾವಳಿಗರಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಈಗ ಮೇಲ್ನೋಟಕ್ಕೆ ಬಿಜೆಪಿ ಜನಪ್ರತಿನಿಧಿಗಳು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ.

–ಮುನೀರ್‌ ಕಾಟಿಪಳ್ಳ, ಟೋಲ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು