ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ

ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿ ಕ್ಯೂ ಆರ್ ಕೋಡ್‌ನಲ್ಲಿ ಲಭ್ಯ: 30 ಸ್ಥಳಗಳಲ್ಲಿ ಅಳವಡಿಸಲು ಸಿದ್ಧತೆ
Last Updated 11 ಜನವರಿ 2023, 22:45 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಪ್ರವಾಸಿಗರ ಅಂಗೈನಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ವಿಭಿನ್ನ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದೆ. ಕ್ಯೂ ಆರ್‌ ಕೋಡ್‌ ತಂತ್ರಜ್ಞಾನವನ್ನು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡಿದ್ದು ಗಮನ ಸೆಳೆಯುವಂತಿದೆ.

ಪ್ರವಾಸಿಗರು ಹೆಚ್ಚಾಗಿ ಭೇಟಿನೀಡುವ ಜಿಲ್ಲೆಯ 30 ಸ್ಥಳಗಳನ್ನು ಗುರುತಿಸಿ ನಿರ್ಧಿಷ್ಟ ಸ್ಥಳಗಳ ಕುರಿತು ಸಂಪೂರ್ಣ ಮಾಹಿತಿಯನ್ನೊಳಗೊಂಡ ತಲಾ ಎರಡು ಕ್ಯೂಆರ್ ಕೋಡ್‌ ಫಲಕಗಳನ್ನು ಪ್ರವಾಸಿ ತಾಣಗಳಲ್ಲಿ ಅಳವಡಿಸಲಾಗುತ್ತಿದೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮೊಬೈಲ್‌ನಲ್ಲಿರುವ ಸ್ಕ್ಯಾನರ್ ಮೂಲಕ ಒಂದು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಿಕಿಪಿಡಿಯಾ ಪುಟ ತೆರೆದುಕೊಳ್ಳಲಿದ್ದು ನಿರ್ಧಿಷ್ಟ ಸ್ಥಳದ ಕುರಿತು ಸಮಗ್ರ ಚಿತ್ರಣ ಲಭ್ಯವಾಗಲಿದೆ.

ಮತ್ತೊಂದು ಕ್ಯೂಆರ್ ಕೋಡ್‌ನಲ್ಲಿ ಉಡುಪಿ ಟೂರಿಸಂ ವೆಬ್‌ಸೈಟ್‌ ತೆರೆದುಕೊಳ್ಳಲಿದ್ದು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿಯನ್ನು ಚಿತ್ರಸಹಿತ ವೀಕ್ಷಿಸಬಹುದು. ಇದರಿಂದ ಜಿಲ್ಲೆಯ ಮತ್ತಷ್ಟು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಲಭ್ಯವಾಗಲಿದ್ದು ಪ್ರವಾಸವನ್ನು ಮತ್ತಷ್ಟು ಸುಂದರ ಹಾಗೂ ಸ್ಮರಣೀಯವಾಗಿಸಿಕೊಳ್ಳಬಹುದು.

ಪ್ರಾರಂಭಿಕ ಹಂತದಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಐತಿಹಾಸಿಕ ಭುಜಂಗ ಉದ್ಯಾನದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಉದ್ಯಾನ ಸ್ಥಾಪನೆಯಾದ ವರ್ಷ, ಉದ್ಯಾನದಲ್ಲಿರುವ ರೇಡಿಯೋ ಟವರ್‌, 1934ರಲ್ಲಿ ಮಹಾತ್ಮಾ ಗಾಂಧೀಜಿ ಉದ್ಯಾನಕ್ಕೆ ಭೇಟಿನೀಡಿದ ವಿವರಗಳು ಚಿತ್ರಸಹಿತ ಇಲ್ಲಿ ಲಭ್ಯ.

ಈಚೆಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಗುರುಪ್ರಸಾದ್‌ ಭುಜಂಗ ಉದ್ಯಾನದಲ್ಲಿ ಮೊದಲ ಕ್ಯೂಆರ್ ಕೋಡ್‌ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕ್ಯೂಆರ್ ಕೋಡ್‌ ಪರಿಕಲ್ಪನೆಯ ಹಿಂದಿರುವುದು ಉಡುಪಿಯ ಡಾ.ಜಿ.ಆರ್.ಶಂಕರ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು. ಕಾಲೇಜಿನ ಪ್ರಾಧ್ಯಾಪಕರ ನೆರವಿನಿಂದ ವಿಕಿಪೀಡಿಯಾ ಇ ಲರ್ನಿಂಗ್ ತಂಡವನ್ನು ಕಟ್ಟಿಕೊಂಡಿರುವ ವಿದ್ಯಾರ್ಥಿನಿಯರು ಇದುವರೆಗೂ 500ಕ್ಕೂ ಹೆಚ್ಚು ಲೇಖನಗಳನ್ನು ವಿಕಿಪಿಡಿಯಾಗೆ ಬರೆದಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಡ್ಡಾಡಿ, ಸ್ಥಳೀಯರಿಂದ ನಿರ್ಧಿಷ್ಟವಾದ ಸ್ಥಳದ ಬಗ್ಗೆ ನಿಖರವಾದ ಮಾಹಿತಿ ಕಲೆಹಾಕಿ ಚಿತ್ರ ಸಹಿತ ಲೇಖನಗಳನ್ನು ಪ್ರಕಟಿಸಿದ್ದಾರೆ. ಲಕ್ಷಾಂತರ ಮಂದಿ ಓದುಗರು ಓದಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ಡಾ.ಜಿ.ಶಂಕರ್ ಕಾಲೇಜಿನ ವಿದ್ಯಾರ್ಥಿನಿಯರ ಬರಹ ಆಸಕ್ತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಪ್ರವಾಸೋದ್ಯಮ ಇಲಾಖೆ ವಿದ್ಯಾರ್ಥಿನಿಯರನ್ನೇ ಕ್ಯೂಆರ್ ಕೋಡ್ ಕಾರ್ಯಕ್ರಮ ಅನುಷ್ಠಾನಕ್ಕೆ ಬಳಸಿಕೊಂಡಿದೆ. ಜಿಲ್ಲೆಯ ಪ್ರಸಿದ್ಧ ತಾಣಗಳ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿನಿಯರಿಗೆ ಕೊಟ್ಟು ಅವರಿಂದ ಲೇಖನಗಳನ್ನು ಬರೆಸುತ್ತಿದೆ.

ವಿದ್ಯಾರ್ಥಿನಿಯರು ಪ್ರತಿಯೊಂದು ಪ್ರವಾಸಿ ಸ್ಥಳಗಳಿಗೆ ಖುದ್ದು ಭೇಟಿನೀಡಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಲೆ ಹಾಕಿ ಲೇಖನ ಸಿದ್ಧಪಡಿಸಿ ವಿಕಿಪೀಡಿಯಾಗೆ ಹಾಕಲಿದ್ದಾರೆ. ಬಳಿಕ ಪ್ರವಾಸೋದ್ಯಮ ಇಲಾಖೆಯು ಬರಹಗಳಿಗೆ ಕ್ಯೂಆರ್‌ ಕೋಡ್ ರೂಪ ನೀಡಿ ಪ್ರವಾಸಿ ತಾಣಗಳಲ್ಲಿ ಅಳವಡಿಸಲಾಗುತ್ತದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್.

ಈಚೆಗೆ ನಡೆದ ಬ್ಲಾಗರ್ಸ್‌ ಮೀಟ್‌ ಯಶಸ್ಸು ಕಂಡಿದ್ದು, ಸಾಮಾಜಿಕ ಜಾಲತಾಣವನ್ನು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಕ್ಯೂ ಆರ್ ಕೋಡ್‌ ಕೂಡ ಅನುಷ್ಠಾನಗೊಂಡಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಭವಿಷ್‌ ಕುಮಾರ್.

‘ಅಂಗೈನಲ್ಲಿ ಮಾಹಿತಿ ಕೋಶ’

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಡಳಿತದ ಮಾರ್ಗದರ್ಶನ ಹಾಗೂ ಡಾ.ಜಿ.ಶಂಕರ್ ಕಾಲೇಜಿನ ವಿಕಿಪಿಡಿಯ ಇ ಲರ್ನಿಂಗ್ ತಂಡದ ಸಹಯೋಗದಲ್ಲಿ ಜಿಲ್ಲೆಯ 30 ಪ್ರವಾಸಿ ತಾಣಗಳಲ್ಲಿ ಕ್ಯೂಆರ್ ಕೋಡ್‌ ಅಳವಡಿಸಲಾಗುತ್ತಿದೆ. ಪ್ರವಾಸಿಗರು ಪ್ರವಾಸದ ಸ್ಥಳದ ಬಗ್ಗೆ ಅವರಿವರ ಬಳಿ ವಿಚಾರಿಸುವ ಅವಶ್ಯಕತೆ ಇಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಸಮಗ್ರ ಮಾಹಿತಿ ಲಭ್ಯವಾಗಲಿದೆ. ಜತೆಗೆ ಇತರ ಪ್ರವಾಸಿ ತಾಣಗಳ ಮಾಹಿತಿಯೂ ಸಿಗಲಿದ್ದು, ಟೂರ್ ಪ್ಲಾನ್ ಮೂಲಕ ಕಡಿಮೆ ಅವಧಿಯಲ್ಲಿ ಪ್ರವಾಸಿಗರು ಹೆಚ್ಚು ಸ್ಥಳಗಳನ್ನು ವೀಕ್ಷಿಸಬಹುದು.

–ಗುರುಪ್ರಸಾದ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ

ಕ್ಯೂಆರ್ ಕೋಡ್ ಲಾಭ ಏನು?

ಒಂದು ನಿರ್ಧಿಷ್ಟವಾದ ಪ್ರವಾಸಿ ತಾಣದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಜಾಹೀರಾತು ಫಲಕಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ. ಬೃಹತ್ ಫಲಕ ಅಳವಡಿಸಿದರೆ ಆರ್ಥಿಕ ಹೊರೆಯ ಜೊತೆಗೆ, ನಿರ್ವಹಣೆಯ ಹೊಣೆಗಾರಿಕೆಯನ್ನೂ ನಿಭಾಯಿಸಬೇಕಾಗುತ್ತದೆ. ಆದರೆ, ಕ್ಯೂಆರ್ ಕೋಡ್‌ನಲ್ಲಿ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಚಿಕ್ಕದಾದ ಜಾಗದಲ್ಲಿಯೂ ಅಳವಡಿಸಬಹುದು. ಪ್ರವಾಸಿ ತಾಣದ ವಿಶೇಷತೆ, ಇತಿಹಾಸ, ಚಿತ್ರ, ಸಂಪರ್ಕ ಸಂಖ್ಯೆ ಸಹಿತ ಸಮಗ್ರ ವಿವರಗಳನ್ನು ಚಿಕ್ಕ ಕ್ಯೂಆರ್ ಕೋಡ್‌ನಲ್ಲಿ ತುಂಬಿಸಬಹುದು. ಪ್ರವಾಸಿಗರ ಕೈನಲ್ಲಿ ಮೊಬೈಲ್ ಇದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT