ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ | ಮರಗಳ್ಳತನ, ಕಾಡುಪ್ರಾಣಿಗಳ ಹಾವಳಿ: ಪ್ರತಿಭಟನೆಯ ಎಚ್ಚರಿಕೆ

ಹೆಬ್ರಿ ತಾಲ್ಲೂಕು ಪ್ರಗತಿಪರ ನಾಗರಿಕ ಸೇವಾ ಸಮಿತಿ ಸಭೆ
Published 24 ಆಗಸ್ಟ್ 2023, 14:15 IST
Last Updated 24 ಆಗಸ್ಟ್ 2023, 14:15 IST
ಅಕ್ಷರ ಗಾತ್ರ

ಹೆಬ್ರಿ: ತಾಲ್ಲೂಕು ಪ್ರಗತಿಪರ ನಾಗರಿಕ ಸೇವಾ ಸಮಿತಿ ಇದರ ಸಾಮಾನ್ಯ ಸಭೆ ಹೆಬ್ರಿಯಲ್ಲಿ ಬುಧವಾರ ನಡೆಯಿತು.

ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು.

ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮಾತನಾಡಿ, ‘ನಾಡ್ಪಾಲು, ಕಬ್ಬಿನಾಲೆ ಸೇರಿದಂತೆ ಹೆಬ್ರಿಯ ವಿವಿಧ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ವಿಪರೀತ ಹಾವಳಿಯಿದ್ದು, ರೈತರ ತೋಟಗಳನ್ನು ನಾಶಪಡಿಸುತ್ತಿವೆ. ಈಚೆಗೆ ತಿಂಗಳೆಯಲ್ಲಿ ಆನೆಯ ಹಾವಳಿಯಿಂದ ಬೆಳೆ ಹಾನಿ ಸಂಭವಿಸುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮತ್ತು ಬೆಳೆಹಾನಿ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು. ಕಾಡುಪ್ರಾಣಿಗಳಿಂದ ಸಂತ್ರಸ್ತ ಗ್ರಾಮಗಳಿಗೆ ಪರಿಹಾರ, ಕ್ರಮಗಳನ್ನು ಶೀಘ್ರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ್‌, ಅರಣ್ಯ ಇಲಾಖೆ, ವನ್ಯಜೀವಿ ಇಲಾಖೆಯ‌ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಗುಳ್ಕಾಡು ಭಾಸ್ಕರ್‌ ಶೆಟ್ಟಿ ಮಾತನಾಡಿ, ‘ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದು ಅದರ ನಡುವೆ ಕಾಡುಪ್ರಾಣಿಗಳ ಮಿತಿಮೀರಿದ ಹಾವಳಿಯಿಂದ ಸಮಸ್ಯೆಯಾಗುತ್ತಿದೆ. ಅರಣ್ಯ ಭಾಗದಲ್ಲಿ ಮರಗಳ್ಳತನದಿಂದ ಅರಣ್ಯ ಸಸ್ಯ ಸಂಪತ್ತು ನಾಶವಾಗುತ್ತಿದ್ದು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ರೈತರ ಹಿತರಕ್ಷಣೆಯೊಂದಿಗೆ ಅರಣ್ಯ ಸಂಪತ್ತನ್ನು ಉಳಿಸಬೇಕಾಗಿದೆ. ವನ್ಯಜೀವಿ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಭಾಗಗಳಿಂದ ಕಾಡುಪ್ರಾಣಿಗಳನ್ನು ತಂದು ಜನವಸತಿಯಿರುವ ಗ್ರಾಮೀಣ ಭಾಗಗಳಿಗೆ ಬಿಡುತ್ತಿದ್ದು ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಕಾಡಿನ ರಕ್ಷಣೆ, ಪ್ರಾಣಿಗಳೊಂದಿಗೆ ರೈತರ ರಕ್ಷಣೆಯೂ ನಿಮ್ಮ ಜವಾಬ್ದಾರಿಯಾಗಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ’ ಆಗ್ರಹಿಸಿದರು.

‘ಸಂಘದ ಹಿತರಕ್ಷಣೆಯೊಂದಿಗೆ ಸದಸ್ಯರು ಯಾವುದೇ ರಾಜಕೀಯ ಮಾಡದೆ ಸಾರ್ವಜನಿಕ ಹಿತಕ್ಕಾಗಿ ದುಡಿಯಬೇಕು’ ಎಂದು ಸಾಮಾಜಿಕ ಹೋರಾಟಗಾರ ಮುಟ್ಲಪಾಡಿ ಸತೀಶ್ ಶೆಟ್ಟಿ ಹೇಳಿದರು.

ಗ್ರಾಮಸ್ಥರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ರಮೇಶ್ ಶೆಟ್ಟಿ ಸೀತಾನದಿ, ಅಣ್ಣಪ್ಪ ಕುಲಾಲ್ ಚಾರ, ಎಚ್.ಕೆ. ನಾರಾಯಣ ನಾಯ್ಕ್‌, ಎಚ್.ಸಂಜೀವ ನಾಯ್ಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT