ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷಯರೋಗ: ವಯಸ್ಕರಿಗೂ ಬರಲಿದೆ ಬಿಸಿಜಿ ಲಸಿಕೆ

ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚಳ
Published : 8 ಆಗಸ್ಟ್ 2024, 4:54 IST
Last Updated : 8 ಆಗಸ್ಟ್ 2024, 4:54 IST
ಫಾಲೋ ಮಾಡಿ
Comments

ಉಡು‍ಪಿ: ದೇಶದಲ್ಲಿ ಕ್ಷಯರೋಗವನ್ನು (ಟಿ.ಬಿ) ನಿರ್ಮೂಲನೆ ಮಾಡುವ ಉದ್ದೇಶದಿಂದ ವಯಸ್ಕರಿಗೂ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್ ಗೆರಿನ್) ಲಸಿಕೆಯನ್ನು ನೀಡಲು ತಯಾರಿ ನಡೆಯುತ್ತಿದೆ.

ಸಾಮಾನ್ಯವಾಗಿ ಕ್ಷಯರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನವಜಾತ ಶಿಶುಗಳಿಗೆ ಕಡ್ಡಾಯವಾಗಿ ಬಿಸಿಜಿ ಲಸಿಕೆಯನ್ನು ನೀಡಲಾಗುತ್ತಿದ್ದು, ಈ ರೋಗವನ್ನು ತಡೆಗಟ್ಟುವಲ್ಲಿ ಇದು ಹೆಚ್ಚು ಪರಿಣಾಮಕಾರಿ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವುದರಿಂದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕಾರ್ಯಕ್ಕೆ ಮುಂದಾಗಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ವಯಸ್ಕರಿಗೆ ಬಿಸಿಜಿ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ನಮ್ಮ ರಾಜ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ವಿಜಯಪುರ, ಬೀದರ್‌ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಆರೋಗ್ಯ ಇಲಾಖೆಯ ದತ್ತಾಂಶಗಳನ್ನು ಗಮನಿಸಿದರೆ, ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಕ್ಷಯರೋಗಿಗಳ ಸಂಖ್ಯೆ ಹೆಚ್ಚಾಗುವುದನ್ನು ಗಮನಿಸಬಹುದು.

ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ ಇರುವ ವಯಸ್ಕರಿಗೆ ಪ್ರಾಯೋಗಿಕವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ತಿಳಿಸಿದ್ದಾರೆ.

ಎಚ್‌ಐವಿ ಮೊದಲಾದ ರೋಗಗಳಿರುವವರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಂತಹವರಿಗೆ ಕ್ಷಯರೋಗ ಬಾಧಿಸುವ ಸಾಧ್ಯತೆ ಇರುತ್ತದೆ. ಕ್ಷಯರೋಗ ಕೂದಲು, ಉಗುರು ಹೊರತುಪಡಿಸಿ ದೇಹದ ಯಾವ ಭಾಗಕ್ಕೂ ಬಾಧಿಸಬಹುದು. ಆದರೆ ಶ್ವಾಸಕೋಶಕ್ಕೆ ಬಾಧಿಸಿದರೆ ಹೆಚ್ಚಾಗಿ ಹರಡುತ್ತದೆ. ರೋಗಿಯು ಕೆಮ್ಮುವಾಗ ಹೊರಬರುವ ಕಣಗಳಿಂದ ಹರಡುವ ಸಾಧ್ಯತೆ ಇರುತ್ತದೆ ಎಂದರು.

ಬ್ಯಾಕ್ಟೀರಿಯಾದಿಂದ ಬರುವ ಈ ರೋಗಕ್ಕೆ 6 ತಿಂಗಳಿಂದ 2 ವರ್ಷದವರೆಗೂ ಆ್ಯಂಟಿ ಬಯೋಟಿಕ್‌ ಉಪಯೋಗಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಕ್ಕರೆ ಕಾಯಿಲೆ, ಹೃದ್ರೋಗ ಮೊದಲಾದ ರೋಗಗಳಿರುವವರಿಗೆ ಬಾಧಿಸಿದರೆ ಹೆಚ್ಚಿನ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.

ಯಾರೆಲ್ಲ ಅರ್ಹರು:

5 ವರ್ಷಗಳಲ್ಲಿ ಟಿ.ಬಿ. ಚಿಕಿತ್ಸೆ ಪಡೆದು ಗುಣಮುಖರಾದವರು, 3 ವರ್ಷಗಳಿಂದ ಕ್ಷಯರೋಗಿಗಳ ನಿಕಟ ಸಂಪರ್ಕದಲ್ಲಿ ಇರುವವರು, ದೇಹಗಾತ್ರದ ಸೂಚ್ಯಾಂಕ (ಬಿಎಂಐ) ಆಧಾರದಲ್ಲಿ ಎತ್ತರಕ್ಕೆ ಸಮನಾದ ದೇಹ ತೂಕ ಇಲ್ಲದವರು, ಸ್ವಯಂ ವರದಿ ಮಾಡಿಕೊಂಡಿರುವ ಧೂಮಪಾನಿಗಳು, ಸಕ್ಕರೆ ಕಾಯಿಲೆ ಇರುವವರು, 60 ವರ್ಷ ವಯಸ್ಸು ಮೇಲ್ಪಟ್ಟವರು ಈ ಲಸಿಕೆ ಪಡೆಯಲು ಅರ್ಹರು. 

ರೋಗ ಲಕ್ಷಣ: 2 ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು, ಕಫ, ಸಂಜೆ ವೇಳೆ ಜ್ವರ, ಗಣನೀಯ ಮಟ್ಟದಲ್ಲಿ ದೇಹದ ತೂಕ ಕಡಿಮೆಯಾಗುವುದು. ಕಫದಲ್ಲಿ ರಕ್ತದ ಅಂಶ ಕಾಣಿಸಿಕೊಂಡರೆ ಅದು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ.

ಕೆಮ್ಮು ಜ್ವರ ಎರಡು ವಾರಕ್ಕಿಂತ ಜಾಸ್ತಿ ಇದ್ದರೆ ಕಫ ತಪಾಸಣೆ ಮಾಡಿಸಬೇಕು. ಬಿಸಿಜಿ ಲಸಿಕೆ ಪಡೆದುಕೊಂಡರೆ ಕ್ಷಯ ಬರದಂತೆ ತಡೆಗಟ್ಟಬಹುದು.
ಡಾ.ಐ.ಪಿ.ಗಡಾದ್, ಜಿಲ್ಲಾ ಆರೋಗ್ಯಾಧಿಕಾರಿ
ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದಿಲ್ಲ. ಸ್ವ ಇಚ್ಛೆಯಿಂದ ವಯಸ್ಕರ ಬಿಸಿಜಿ ಲಸಿಕೆ ಪಡೆದವರ ಆರೋಗ್ಯವನ್ನು ಮೂರು ವರ್ಷಗಳವರೆಗೆ ನಿರೀಕ್ಷಣೆ ಮಾಡುತ್ತೇವೆ.
ಡಾ.ಚಿದಾನಂದ ಸಂಜು, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ
Udupi_Kshaya Graphics 06.08.2024
Udupi_Kshaya Graphics 06.08.2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT