ಸೋಮವಾರ, ಮಾರ್ಚ್ 8, 2021
24 °C
ಕಳೆಗಟ್ಟಿದ ಅಷ್ಟಮಿ ಸಂಭ್ರಮ: ಮೂಡೆ ಕೊಟ್ಟೆಗಳಿಗೆ ಹೆಚ್ಚಿದ ಬೇಡಿಕೆ

ಉಡುಪಿ: ರಥಬೀದಿಯಲ್ಲಿ ಹೂವಿನ ವ್ಯಾಪಾರ ಜೋರು

ತೃಪ್ತಿ ಎಲ್‌.ಪೂಜಾರಿ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಠದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರಕ್ಕೆ ಹರಿದುಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಬ್ಬದ ಮುನ್ನದಿನವಾದ ಶನಿವಾರ ರಥಬೀದಿ ವ್ಯಾಪಾರಿಗಳಿಂದ ತುಂಬಿಹೋಗಿತ್ತು.

ರಥಬೀದಿಯ ಬೀದಿಯ ತುಂಬೆಲ್ಲ ಹೂವಿನ ವ್ಯಾಪಾರಿಗಳದ್ದೇ ಸದ್ದು. ಉತ್ತರ ಕರ್ನಾಟಕದಿಂದ ಅಷ್ಟಮಿಗಾಗಿ ಹೂ ಮಾರಾಟ ಮಾಡಲು ನೂರಾರು ವ್ಯಾಪಾರಿಗಳು ಲಗ್ಗೆ ಇಟ್ಟಿದ್ದಾರೆ. ಸೇವಂತಿಗೆ, ಮಲ್ಲಿಗೆ, ಚೆಂಡು ಹೂ ಸೇರಿದಂತೆ ಬಗೆಬಗೆಯ ಹೂವುಗಳನ್ನು ಮಾರಾಟಕ್ಕೆ ತಂದಿದ್ದಾರೆ.

ಒಂದು ಮಾರು ಸೇವಂತಿಗೆ ₹ 60, ಕಾಕಡ 40, ತುಳಸಿ ಹಾರ 30, ಗೊಂಡೆ ₹ 80ಕ್ಕೆ ಮಾರಾಟ ಮಾಡಲಾಗುತ್ತಿತ್ತು. ರಥಬೀದಿಯ ತುಂಬೆಲ್ಲ ವ್ಯಾಪಾರಿಗಳೇ ತುಂಬಿಹೋಗಿದ್ದು, ಬಣ್ಣಬಣ್ಣದ ಬಳೆಗಳು, ಬಟ್ಟೆಗಳು, ತಿಂಡಿ ತಿನಿಸುಗಳ ವ್ಯಾಪಾರವೂ ಜೋರಾಗಿದೆ. ‌

ಅಷ್ಟಮಿಗೆ ಕರಾವಳಿಯಲ್ಲಿ ಮೂಡೆ ಕೊಟ್ಟೆಯಲ್ಲಿ ವಿಶೇಷ ಖಾದ್ಯ ತಯಾರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂಡೆ ಕೊಟ್ಟೆಯ ಮಾರಾಟ ರಥಬೀದಿಯಲ್ಲಿ ಕಂಡುಬಂತು. ಅಷ್ಟಮಿಯಂದು ಮೂಡೆ ಕೊಟ್ಟೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ವ್ಯಾಪಾರ ನಡೆಯುತ್ತದೆ.

ಮೂಡೆ ಕೊಟ್ಟೆ ವ್ಯಾಪಾರಿ ಸುಹಾಸಿ ಮಾತನಾಡಿ, 20 ವರ್ಷಗಳಿಂದ ಅಷ್ಟಮಿ ಸಂದರ್ಭದಲ್ಲಿ ಮೂಡೆಕೊಟ್ಟೆ ಮಾರಾಟ ಮಾಡುತ್ತಿದ್ದೇನೆ. ಹಿಂದೆ ಮನೆಗೆ ಬೇಕಾದ ಮೂಡೆ ಕೊಟ್ಟೆಯನ್ನು ತಯಾರಿಸಿಕೊಳ್ಳಲಾಗುತ್ತಿತ್ತು. ಆಧುನೀಕರಣದ ಭರಾಟೆಯಲ್ಲಿ ಮೂಡೆ ಕಟ್ಟುವ ಕಲೆಗಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಮೂಡೆ ಕೊಟ್ಟೆಗಳ ವ್ಯಾಪಾರ ತುಸು ಜೋರಾಗಿರುತ್ತದೆ ಎಂದು ಅನುಭವ ಹಂಚಿಕೊಂಡರು.

ಮುಡೆ ಕೊಟ್ಟೆ ತಯಾರಿಕೆ ಸರಳವಲ್ಲ. ಕಾಡಿನಿಂದ ಪುಂಡೇ ಗರಿ ತರಬೇಕು. ಎಲೆಯಯಲ್ಲಿರುವ ಮುಳ್ಳುಗಳನ್ನು ಜಾಗ್ರತೆಯಿಂದ ತೆಗೆಯಬೇಕು. ಬಿಸಿಯಾದ ಹಬೆಯಲ್ಲಿ ಗರಿಯನ್ನಿಟ್ಟು ಬೇಯಿಸಬೇಕು. ಬಳಿಕ ಮೂಡೆ ಕೊಟ್ಟೆ ತಯಾರಿಸಬೇಕು ಎಂದು ವಿವರಿಸಿದರು.

₹ 100ಕ್ಕೆ 7 ಕೊಟ್ಟೆ
ಸಾಂಪ್ರದಾಯಿಕವಾಗಿ ಕಟ್ಟಿದ ಮೂಡೆ ಕೊಟ್ಟೆ ದುಬಾರಿಯಾಗಿವೆ. ಶನಿವಾರ ಸಂಜೆ ವೇಳೆ ಉಡುಪಿ ರಥಬೀದಿಯಲ್ಲಿ ಮಧ್ಯಮ ಗಾತ್ರದ ಮೂಡೆ ಎಲೆಗಳು ₹ 100ಕ್ಕೆ 7ರಂತೆ ಮಾರಾಟ ಮಾಡಲಾಯಿತು.

ಮತ್ತೊಂದೆಡೆ ಶ್ರೀಕೃಷ್ಣ ಮಠದಲ್ಲಿ ಚಕ್ಕುಲಿ, ಉಂಡೆಗಳ ತಯಾರಿಕೆಯೂ ಭರದಿಂದ ಸಾಗುತ್ತಿದೆ. ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಠವನ್ನು ಶುಚಿಗೊಳಿಸುವ ಕಾರ್ಯವೂ ನಡೆದಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು