ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಜಿಲ್ಲಾ ವಿಶೇಷ ನ್ಯಾಯಾಲಯ ಆದೇಶ
Last Updated 26 ನವೆಂಬರ್ 2019, 14:34 IST
ಅಕ್ಷರ ಗಾತ್ರ

ಉಡುಪಿ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಮಂಗಳವಾರ ಜಿಲ್ಲಾ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ ವಿಧಿಸಿದೆ.

ರಾಜಸ್ತಾನದ ಪದಮ್‌ ಸಿಂಗ್ ಸೇನಿ ಹಾಗೂ ಮುಖೇಶ್ ಸೇನಿ ಶಿಕ್ಷೆಗೆ ಗುರಿಯಾದವರು. ನ.22ರಂದು ನ್ಯಾಯಾಲಯ ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿತ್ತು. ಮಂಗಳವಾರ ಕಠಿಣ ಶಿಕ್ಷೆ ವಿಧಿಸಿದೆ.

ಸಾಮೂಹಿಕ ಅತ್ಯಾಚಾರಕ್ಕೆ (ಸೆಕ್ಷನ್‌ 376 ಡಿ) ಅಡಿ 20 ವರ್ಷ ಕಠಿಣ ಸಜೆ, ₹ 20,000 ದಂಡ, ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಶಿಕ್ಷೆ, ಅಪಹರಣಕ್ಕೆ (ಸೆಕ್ಷನ್‌ 366 ಎ) 10 ವರ್ಷ ಸಾದಾ ಸಜೆ, ₹ 15,000 ದಂಡ, ದಂಡ ಪಾವತಿಸದಿದ್ದರೆ ಹೆಚ್ಚುವರಿ 6 ತಿಂಗಳು ಶಿಕ್ಷೆ ವಿಧಿಸಲಾಗಿದೆ.

ಸಾಕ್ಷ್ಯನಾಶ (201) ಮಾಡಿದ್ದಕ್ಕೆ 7 ವರ್ಷ ಸಾದಾ ಶಿಕ್ಷೆ, ₹ 10,000 ದಂಡ, ದಂಡ ಕಟ್ಟದಿದ್ದರೆ 6 ತಿಂಗಳು ಶಿಕ್ಷೆ,ಜೀವ ಬೆದರಿಕೆ (506) ಹಾಕಿದ್ದಕ್ಕೆ 1 ವರ್ಷ ಸಾದಾ ಸಜೆ, ₹ 5,000 ದಂಡ, ದಂಡ ಕಟ್ಟದಿದ್ದರೆ 3 ತಿಂಗಳು ಜೈಲು, ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಸಜೆ, ₹ 20,000 ದಂಡ ವಿಧಿಸಲಾಗಿದೆ. ದಂಡ ಕಟ್ಟದಿದ್ದರೆ 1 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಎಲ್ಲ ಪ್ರಕರಣಗಳಲ್ಲಿ ವಿಧಿಸಿರುವ ಶಿಕ್ಷೆಯನ್ನು ಆರೋಪಿಗಳು ಏಕಕಾಲದಲ್ಲಿ ಅನುಭವಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ನೊಂದ ಬಾಲಕಿಗೆ ₹ 1 ಲಕ್ಷ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರಕ್ಕೆ ಬಾಲಕಿ ಅರ್ಜಿ ಸಲ್ಲಿಸಲು ಸ್ವತಂತ್ರಳು ಎಂದು ನ್ಯಾಯಾಧೀಶರಾದಸಿ.ಎಂ.ಜೋಷಿ ಆದೇಶಿಸಿದ್ದಾರೆ. ನೊಂದ ಬಾಲಕಿಯ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕರಾದ ವಿಜಯವಾಸು ಪೂಜಾರಿ ವಾದ ಮಂಡಿಸಿದ್ದರು.

ಕಳೆದ ವರ್ಷ ಪೋಕ್ಸೊ ಪ್ರಕರಣದಲ್ಲಿ ಆದೇಶ ಪ್ರಕಟಿಸುವ ಸಂದರ್ಭ ವಿಶೇಷ ಸರ್ಕಾರಿ ಅಭಿಯೋಜಕರ ಮೇಲೆ ಆರೋಪಿಯೊಬ್ಬ ಶೂ ಎಸೆದಿದ್ದ. ಈ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಪ್ರಕರಣದ ವಿವರ

ಜುಲೈ 8, 2016ರಂದು ಆರೋಪಿಗಳು ಬಾಲಕಿಯನ್ನು ಆಮ್ನಿ ವಾಹನದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.ಕೃತ್ಯವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಾಗ ಅತ್ಯಾಚಾರ ನಡೆದಿರುವುದು ವೈದ್ಯರ ಗಮನಕ್ಕೆ ಬಂದಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡುಜುಲೈ 10ರಂದು ಕುತ್ಪಾಡಿಯಲ್ಲಿಆರೋಪಿಗಳನ್ನು ಬಂಧಿಸಿದ್ದರು. ಅಂದಿನಸಿಪಿಐ ಶ್ರೀಕಾಂತ್ ಹಾಗೂ ಜೈಶಂಕರ್ ಪ್ರಕರಣದ ತನಿಖೆ ನಡೆಸಿ ಸೆ.29ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 34 ಸಾಕ್ಷ್ಯಗಳ ಪೈಕಿ ಅಭಿಯೋಜನೆಯ ಪರವಾಗಿ 21 ಸಾಕ್ಷಿಗಳು ಸಾಕ್ಷ್ಯನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT