ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ತೆರಿಗೆದಾರರ ಮೇಲೆ ಹೆಚ್ಚುವರಿ ತೆರಿಗೆ ಬರೆ

ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಿ ನಗರಸಭೆ ಆದೇಶ: ಕೊರೊನಾ ಸಂಕಷ್ಟದ ಮಧ್ಯೆ ಕರ ಭಾರ
Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕು ರಾಜ್ಯವನ್ನು ಲಾಕ್‌ಡೌನ್‌ ಮಾಡಿದೆ. ಜಿಲ್ಲೆಯ ವ್ಯಾಪಾರ, ವಹಿವಾಟು, ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದೆ. ಉದ್ಯಮ ವಲಯ ಸೊರಗಿದ್ದು, ಹಣದ ಹರಿವು ಕಡಿಮೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಗರಸಭೆ ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕರು ತಿಂಗಳಿನಿಂದ ಮನೆಯೊಳಗೆ ಬಂಧಿಯಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಬರಿಗೈಲಿ ಕೂರುವಂತಾಗಿದೆ. ಅಷ್ಟು ಇಷ್ಟು ಕೂಡಿಟ್ಟ ಹಣ ಮನೆಯ ನಿರ್ವಹಣೆಗೆ ಖರ್ಚಾಗಿದೆ. ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವಾಗಲೇ ನಗರಸಭೆ ತೆರಿಗೆ ಹೆಚ್ಚಳ ಮಾಡಿ ಪಾವತಿಗೆ ಸೂಚಿರುವುದು ಎಷ್ಟು ಸರಿ ಎಂಬುದು ಜನರ ಪ್ರಶ್ನೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ನಗರಾಡಳಿತ ಹೆಚ್ಚುವರಿ ತೆರಿಗೆ ಹೊರೆ ಹೊರಿಸಿರುವುದು ಸರಿಯಲ್ಲ. ಈಗಾಗಲೇ ಸಾಲದ ಸುಳಿಯಲ್ಲಿರುವ ಜನರು ಹೆಚ್ಚುವರಿ ತೆರಿಗೆ ಪಾವತಿಯಿಂದ ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ಪರಿಸ್ಥಿತಿ ಸುಧಾರಿಸಿದ ಬಳಿಕ ತೆರಿಗೆ ಹೆಚ್ಚಿಸಬೇಕು ಎನ್ನುತ್ತಾರೆ ಮುಖಂಡರಾದ ಭಾಸ್ಕರ್ ರಾವ್ ಕಿದಿಯೂರು.

ಮೂರು ವರ್ಷಕ್ಕೊಮ್ಮೆ ನಗರಸಭೆ ತೆರಿಗೆಯನ್ನು ಪರಿಷ್ಕರಿಸಬೇಕು ಎಂಬ ನಿಯಮವಿದ್ದರೂ ಪ್ರಸ್ತುತ ಸಮಯದಲ್ಲಿ ಈ ನಿರ್ಧಾರ ಸಮಂಜಸವಲ್ಲ. ಲಾಕ್‌ಡೌನ್‌ ಜಾರಿಯಾದ ನಂತರ ಸಣ್ಣ ಕೈಗಾರಿಕೆಗಳು, ಉದ್ದಿಮೆಗಳು ಶಾಶ್ವತವಾಗಿ ಮುಚ್ಚುವ ಹಂತ ತಲುಪಿವೆ. ಮೀನುಗಾರಿಕಾ ಉದ್ಯಮಕ್ಕೆ ಪೆಟ್ಟುಬಿದ್ದು ಮೀನುಗಾರರು ಕಷ್ಟದಲ್ಲಿದ್ದಾರೆ.

ಉದ್ಯಮಿಗಳು, ವಾಣಿಜ್ಯ ಕಟ್ಟಡಗಳ ಮಾಲೀಕರು, ಮಧ್ಯಮ ವರ್ಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಮುಂದೆ, ಲಾಕ್‌ಡೌನ್ ತೆರವಾದರೂ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತೆ ಹಳಿಗೆ ಬರಲು ಹಲವು ತಿಂಗಳುಗಳೇ ಬೇಕಾಗಬಹುದು. ಹಾಗಾಗಿ, ಮಾನವೀಯ ನೆಲೆಯಲ್ಲಿ ನಗರಸಭೆ ತೆರಿಗೆ ಹೆಚ್ಚಳ ನಿರ್ಧಾರದಿಂದ ಹಿಂದೆ ಸರಿಯಬೇಕು ಎನ್ನುತ್ತಾರೆ ಭಾಸ್ಕರ್ ರಾವ್ ಹಾಗೂ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ.

ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ನಗರಸಭೆ ಹೆಚ್ಚುವರಿ ತೆರಿಗೆಯನ್ನು ಪಡೆಯಬಾರದು. ಜತೆಗೆ, ಹಾಲಿ ತೆರಿಗೆ ಪಾವತಿಸಿದರೆ ಸಿಗುವ ಶೇ 5ರಷ್ಟು ರಿಯಾಯಿತಿಯನ್ನು ಕೆಲವು ತಿಂಗಳುಗಳವರೆಗೂ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.

ನಗರಸಭೆ ಹೇಳುವುದೇನು?
ತೆರಿಗೆ ಹೆಚ್ಚಳ ನಿರ್ಧಾರ ಉಡುಪಿ ನಗರಸಭೆಯದ್ದಲ್ಲ. ಪ್ರತಿ ಮೂರು ವರ್ಷ‌ಕ್ಕೊಮ್ಮೆ ನಗರಸಭೆ ಕನಿಷ್ಠ ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಬೇಕು ಎಂಬ ರಾಜ್ಯ ಸರ್ಕಾರ ನಿಯಮ ರೂಪಿಸಿದೆ.ಅದರಂತೆ 2020–21ನೇ ಸಾಲಿಗೆ ಅನ್ವಯವಾಗುವಂತೆ ಶೇ 15ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ವರ್ಷ ಏಪ್ರಿಲ್‌ 30ರೊಳಗೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಶೇ 5ರಷ್ಟು ರಿಯಾಯಿತಿ ಕೊಡಲಾಗುತ್ತಿತ್ತು. ಈ ವರ್ಷ ಕೊರೊನಾ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ಅವಧಿಯನ್ನು ಮೇ ಅಂತ್ಯಕ್ಕೆ ವಿಸ್ತರಿಸಲಾಗಿದೆ. ಆನ್‌ಲೈನ್‌ನಲ್ಲಿ ಹಾಗೂ ಆಫ್‌ಲೈನ್‌ನಲ್ಲಿ (ನೇರವಾಗಿ ಬಂದು) ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತರಾದ ಆನಂದ್ ಸಿ.ಕಲ್ಲೋಳಿಕರ್.

‘ಬಿಜೆಪಿ ಸರ್ಕಾರ ನೈತಿಕತೆ ಪ್ರದರ್ಶಿಸಬೇಕು’
ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ರಾಜ್ಯ ಸರ್ಕಾರ ನಗರಸಭೆ ತೆರಿಗೆ ಹೆಚ್ಚಳ ಮಾಡಿರುವುದು ಖಂಡನೀಯ. ಶ್ರೀಮಂತರೇ ಕೊರೊನಾ ಹೊಡೆತಕ್ಕೆ ನಲುಗಿರುವಾಗ ಬಡವರ ಬಳಿ ಹೆಚ್ಚುವರಿ ತೆರಿಗೆ ಕಟ್ಟಲು ಹಣವಾದರೂ ಎಲ್ಲಿ ಬರಬೇಕು. ಉಡುಪಿ ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿದೆ, ಶಾಸಕರಿದ್ದಾರೆ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚುವರಿ ತೆರಿಗೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಾರೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT