ಉಡುಪಿ: ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಭಾನುವಾರ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ ಅರುಣ ಚೌಗಲೆ ಬಂಧಿತ ಆರೋಪಿ ಎನ್ನಲಾಗಿದ್ದು, ಈತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ಕೃತ್ಯ ಎಸಗಿದ ನಂತರ ಉಡುಪಿಯಿಂದ ಪರಾರಿಯಾಗಿ ಕುಡಚಿಯ ಸಂಬಂಧಿಯೊಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಲೋಕೇಷನ್ ಆಧರಿಸಿ ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದು ಹೆಚ್ಚಿನ. ವಿಚಾರಣೆಗೆ ಉಡುಪಿಗೆ ಕರೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಕರಣದ ವಿವರ:
ನ. 12ರಂದು ಬೆಳಿಗ್ಗೆ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಹಸೀನಾ( 48), ಮಕ್ಕಳಾದ ಅಫ್ನಾನ್ (23), ಅಯ್ನಾಜ್ (20), ಅಸೀಮ್ (14) ಎಂಬುವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು.
ಎಸ್‌ಪಿ ಸ್ಪಷ್ಟನೆ:
ಕೊಲೆ ಪ್ರಕರಣ ಸಂಬಂಧ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಕೆ.ಅರುಣ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.