ಪಡುಬಿದ್ರಿ (ಉಡುಪಿ): ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್ ಗೇಟ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಕಾರ್ಯನಿರ್ವಾಹಕ ಎಂಜಿನಿಯರ್ ರಘು ಎಲ್. ಹಾಗೂ ಸಹಾಯಕ ಎಂಜಿನಿಯರ್ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅಧಿಕಾರಿಗಳು ಬರುವ ಸುದ್ದಿ ತಿಳಿದು ಟೋಲ್ ವಿರೋಧಿ ಹೋರಾಟಗಾರರು ಸ್ಥಳದಲ್ಲಿ ಸೇರಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಟೋಲ್ ವಿರೋಧಿ ಹೋರಾಟಗಾರರ ಮುಖಂಡರಿಗೆ ಟೋಲ್ ಕುರಿತ ಮಾಹಿತಿ ನೀಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟಗಾರರು ಪಟ್ಟುಹಿಡಿದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಟೋಲ್ ಗೇಟ್ ಗುತ್ತಿಗೆ ವಹಿಸಿಕೊಂಡ ಕಂಪನಿಯ ಸಿಬ್ಬಂದಿ ಹಾಗೂ ಟೋಲ್ ವಿರೋಧಿ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ಶಾಂತಗೊಳಿಸಲಾಯಿತು.