ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಹಾನಿಯಾಗದಂತೆ ಎಚ್ಚರ ವಹಿಸಿ: ಎಸ್.ಅಂಗಾರ

ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ
Last Updated 6 ಜುಲೈ 2022, 14:26 IST
ಅಕ್ಷರ ಗಾತ್ರ

ಉಡುಪಿ: ಪ್ರಸಕ್ತ ಮಳೆಗಾಲದಲ್ಲಿ ಜನರ ಜೀವ ಹಾಗೂ ಜಾನುವಾರು ಜೀವಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಅವಘಡಗಳಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾದರೆ ನಷ್ಟ ಪರಿಹಾರ ಅಂದಾಜಿಸುವಾಗ ಹಾನಿಯ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ಗ್ರಾಮ ಲೆಕ್ಕಿಗರು ಪ್ರಾಥಮಿಕ ವರದಿ ಸಲ್ಲಿಸಬೇಕು. ವರದಿಯ ಆಧಾರದ ಮೇಲೆ ಹಾನಿಯ ಪ್ರಮಾಣವನ್ನು ಎಂಜಿನಿಯರ್‌ಗಳು ನಿರ್ಧರಿಸಬೇಕು ಎಂದರು.

ಮಳೆಯ ನೀರಿನಿಂದ ಮನೆ ತಳಪಾಯಕ್ಕೆ ಹಾನಿಯಾದಲ್ಲಿ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹೊಸ ಮನೆ ನಿರ್ಮಾಣ ಅಗತ್ಯವಿರುತ್ತದೆ. ತಳಪಾಯ ಹಾನಿಯಾದ ಮನೆಗಳ ದುರಸ್ಥಿಗೆ ಯೋಗ್ಯವಾಗಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಹಾನಿ ಅಂದಾಜಿಸುವಾಗ ಸೂಕ್ಷ್ಮತೆ ಆಧರಿಸಿ ವರದಿ ನೀಡಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯ ನೀರು ನಿಂತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಗಳ ಬದಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತದ ಸೂಚನೆಗೆ ಸ್ಪಂದಿಸುತ್ತಿಲ್ಲ. ಸಭೆಗಳಿಗೂ ಹಾಜರಾಗುತ್ತಿಲ್ಲ. ಗುತ್ತಿಗೆದಾರರ ಎಂಜಿನಿಯರ್‌ಗಳು ಮಾತ್ರ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಸಮರ್ಪಕ ಕಾಮಗಾರಿಯಿಂದ ಅಪಘಾತಗಳು ಉಂಟಾದರೆ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಪ್ರಕರಣ ದಾಖಲಿಸುವಂತೆ ಎಸ್‌ಪಿ ವಿಷ್ಣುವರ್ಧನ್ ಅವರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಸಂದರ್ಭ ನಿರ್ಮಾಣ ಸ್ಥಳದ ವಸ್ತುಸ್ಥಿತಿಗೆ ಅನುಗುಣವಾಗಿ ನೀಲಿ ನಕ್ಷೆ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆ ಹಾನಿಯಿಂದ ಪೂರ್ಣ ಪ್ರಮಾಣದ ಮನೆಹಾನಿಯಾಗಿದ್ದರೆ ಎನ್.ಡಿ.ಆರ್‌ಎಫ್ ನಿಯಮಾವಳಿಯಂತೆ ಪರಿಹಾರದ ಮೊತ್ತದ ಜತೆಗೆ ಹೊಸ ಮನೆ ಕಟ್ಟಿಕೊಳ್ಳಲು ವಸತಿ ಯೋಜನೆಯಡಿ ಸೌಲಭ್ಯ ಒದಗಿಸಿ ಶಾಶ್ವತ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.

ಕಾರ್ಕಳ ತಾಲ್ಲೂಕಿನಲ್ಲಿ ಹೆಚ್ಚು ಸಿಡಿಲು ಬಡಿಯುವ ಘಟನೆಗಳು ಸಂಭವಿಸುತ್ತಿವೆ. ಕಳೆದ 5 ವರ್ಷಗಳ ಸಿಡಿಲು ಬಡಿದ ಪ್ರಕರಣಗಳ ಮಾಹಿತಿ ಕ್ರೂಢೀಕರಿಸಿ ತಜ್ಞರ ವರದಿ ತಯಾರಿಸಿ, ಸಿಡಿಲಿನಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಎಸ್‌ಪಿ ವಿಷ್ಣುವರ್ಧನ್, ಡಿಎಫ್‌ಒ ಆಶೀಶ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT